ಚೇಳೂರು: ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ, ಯುವಕರ ಬಳಗದಿಂದ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಸುಂದರವಾಗಿ ಅಲಂಕರಿಸಿದ್ದ ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ‘ಜೈ ಭೀಮ್’ ಘೋಷಣೆಗಳನ್ನು ಕೂಗುತ್ತಾ, ಅಂಬೇಡ್ಕರ್ ಅವರ ಕ್ರಾಂತಿಗೀತೆಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ನೀಡಿದರು.

ಈ ಸಂದರ್ಭದಲ್ಲಿ ಕುರ್ಲ ಕದಿರಪ್ಪ, ಗಿನ್ನಿ ಶ್ರೀನಿವಾಸ್, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ.ಎಸ್. ರಾಮಾಂಜನೇಯ ಹಾಗೂ ಭಾಗ್ಯಮ್ಮ, ಬಿಎಸ್ಪಿ ಮುಖಂಡ ವೆಂಕಟರವಣ, ಪೋಸ್ಟ್ ಮಧುಸೂದನ, ವಿ. ರಾಮಾಂಜನೇಯ, ಬಳ್ಳಾರಿ ನರಸಿಂಹ, ಚಿಕ್ಕ ನರಸಿಂಹ, ಪೋಸ್ಟ್ ಮಾಸ್ಟರ್ ನರಸಿಂಹಪ್ಪ, ಮಾಜಿ ನಂಬರ್ ಅಂಜಿ, ಚಂದ್ರಮೌಲಿ, ವಾಟರ್ ಮ್ಯಾನ್ ನಾರಾಯಣಪ್ಪ, ಸಂಗಪ್ಪ ಸೇರಿದಂತೆ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ




