ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸದಾಗಿ ರೂ.1 ಲಕ್ಷ 90 ಸಾವಿರ ಹೊಸ ಸಾಲ ಮಾಡಿದ್ದು, ಎಲ್ಲಾ ರಂಗದಲ್ಲೂ ಬೆಲೆ ಏರಿಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಣಿ ಶುಲ್ಕ 600%, ಪ್ರಾಪರ್ಟಿ ಗೈಡೆನ್ಸ್ ವ್ಯಾಲ್ಯೂ 30%, ವಾಹನ ನೋಂದಣಿ ಶುಲ್ಕ 10%, ಆಸ್ಪತ್ರೆಗಳ ಸೇವಾ ದರ 5%, ವಿದ್ಯುತ್ ದರ 14.5%, ಹಾಲಿನ ದರ 15%, ಬಸ್ ದರ 15% ಏರಿಕೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ದರ ಏರಿಕೆ ಮಾಡಿರುವ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಗುಡುಗಿದರು.
ಲೋಕೋಪಯೋಗಿ, ನೀರಾವರಿ, ಸಾರಿಗೆ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ತಮ್ಮ ವಿದ್ಯುತ್ ಬಿಲ್ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ರಾಜ್ಯದ ಈ ಸ್ಥಿತಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದೆದೂ ಕೂಡ ಹೀಗೆ ಇರಲಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಕುಟುಕಿದರು. ರಾಜಕೀಯವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದು ನಾವು ಸುಮ್ಮನೇ ಟೀಕಿಸುತ್ತಿಲ್ಲ. ಈ ಸಂಬಂಧ ನಮ್ಮಲ್ಲಿ ಪುರಾವೆಗಳಿವೆ ಎಂದರು.