ಬೆಂಗಳೂರು : ಈಗಾಗಲೇ ಕಾಡಿನಿಂದ ನಾಡಿಗೆ ವನ್ಯ ಮೃಗಗಳು ವಲಸೆ ಬರುತ್ತಿರುವುದರಿಂದ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಏರ್ಪಡುತ್ತಿರುವ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ಹೊಸದೇನಲ್ಲ.
ಇದಲ್ಲದೇ, ಕೆಲವೊಮ್ಮೆ ಪ್ರವಾಸಕ್ಕೆ ಹೋದಾಗ ಅರಣ್ಯ ಪ್ರದೇಶಗಳ ದಾರಿಯಲ್ಲಿ ಪ್ರವಾಸಿಗರಿಗೆ ಕಾಡು ಪ್ರಾಣಿಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.
ಹೀಗೆ ಕಂಡಾಗ ಪ್ರವಾಸಿಗರು ಮಾತ್ರವಲ್ಲ, ಕಾಡು ರಸ್ತೆಯ ಮೂಲಕ ಹೋಗುವ ಪ್ರಯಾಣಿಕರು ಸಹ ತಮ್ಮ ಮೊಬೈಲ್ನಲ್ಲಿ ಪ್ರಾಣಿಗಳ ಫೋಟೋ ತೆಗೆದುಕೊಳ್ಳುವುದು, ಹತ್ತಿರಕ್ಕೆ ಹೋಗಿ ವಿಡಿಯೋ, ರೀಲ್ಸ್ ಮಾಡಿಕೊಳ್ಳುವುದು.
ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಾರೆ. ಇಂತಹ ಅಪಾಯಕಾರಿ ಕೃತ್ಯಕ್ಕೆ ಇನ್ಮುಂದೆ ಕೈಹಾಕದಂತೆ ಬ್ರೇಕ್ ಹಾಕಲು ಇದೀಗ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇನ್ಮುಂದೆ ವನ್ಯಜೀವಿಗಳ ಜೊತೆಗೆ ಸೆಲ್ಫಿ ತೆಗೆದುಕೊಳುವ ಪ್ರಕರಣಗಳು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅರಣ್ಯ ಪ್ರದೇಶದ ಒಳ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ವಾಹನದಿಂದ ಕೆಳಗಿಳಿದು ರೀಲ್ಸ್ ಮಾಡುವುದು, ವನ್ಯಜೀವಿಗಳ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಇನ್ಮುಂದೆ ಕಡ್ಡಾಯವಾಗಿ ಮಾಡುವಂತಿಲ್ಲ.
ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಕೆಲ ಪ್ರವಾಸಿಗರು ಆನೆಯ ಜೊತೆ ಸೆಲ್ಫಿ ತೆಗೆದುಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಚಿವರು ತಮ್ಮ ಇಲಾಖೆ ಸಿಬ್ಬಂದಿಗೆ ಕಠಿಣ ಕ್ರಮ ಜರುಗಿಸುವಂತೆ ಖಡಕ್ ಆದೇಶ ಮಾಡಿದ್ದಾರೆ.