ಬೆಳಗಾವಿ : ಟೋಲ್ ಪ್ಲಾಜಾ ಮೂಲಕ ಹಾದು ಹೋಗುವಾಗ ಲಾರಿಯೊಂದರ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಸ್ಥಳದಲ್ಲೇ ಹೊತ್ತಿ ಉರಿದ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.
ಲಾರಿ ಪಾಸ್ ಆಗುವ ವೇಳೆ ಡಿಸೇಲ್ ಟ್ಯಾಂಕ್ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ಹಣ ಸಂಗ್ರಹ ಮಾಡುವ ಎರೆಡು ಕ್ಯಾಬಿನ್ಗೆ ಅಗ್ನಿ ಆವರಿಸಿಕೊಂಡಿತು.
ಬೆಂಕಿ ಆವರಿಸುತ್ತಿದ್ದಂತೆ ಘಟನಾ ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ತಕ್ಷಣ ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.
ಲಾರಿ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ಹೆದ್ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ವಾಹನದ ಅವಶೇಷಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.