ತುರುವೇಕೆರೆ: ಪಟ್ಟಣದ 12 ನೇ ವಾರ್ಡಿನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶೈಕ್ಷಣಿಕ ಪರಿಕರ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ನಂ.ರಾಜು ಮಾತನಾಡಿ, ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನವಿರಿಸಿ ಶಾಲೆಯ ಪ್ರಗತಿಗಾಗಿ, ಹಾಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಪುಸ್ತಕ ಪರಿಕರಗಳನ್ನು ವಿತರಣೆ ಮಾಡಲು ಬಂದಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಪ್ರತಿಯೊಬ್ಬರೂ ತಾವು ಕಲಿತ ಶಾಲೆ, ಹುಟ್ಟಿದ ಊರು, ಪೋಷಕರ ಬಗ್ಗೆ ಪ್ರೀತಿ, ಅಭಿಮಾನ, ಗೌರವ ಹೊಂದಿರಬೇಕಿದೆ. ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಇತರೆ ಪರಿಕರ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ, ಅವರಿಗೆ ಶಾಲೆಯ ಪರವಾಗಿ ಧನ್ಯವಾದಗಳು ಎಂದರು.
ಶಾಲೆಯ ಎಲ್.ಕೆ.ಜಿ., ಯುಕೆಜಿ ಹಾಗೂ ಒಂದರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು ಮುಂತಾದ ಶೈಕ್ಷಣಿಕ ಪರಿಕರ ವಿತರಿಸಲಾಯಿತು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕಿಯರಾದ ಸವಿತ, ಪುಷ್ಪಾವತಿ, ನೇತ್ರಾವತಿ, ಹಿರಿಯ ವಿದ್ಯಾರ್ಥಿಗಳಾದ ನರಸಿಂಹ, ಯಶವಂತ್, ಮೌಸೀನಬಾನು, ಸ್ವಾತಿ, ಜ್ಯೋತಿ, ವಿನೋದ, ಆಶಾ, ರೇಣುಕಾ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್