ಬೆಂಗಳೂರು: ಯಾವುದೇ ಧರ್ಮದ ಬಗ್ಗೆ ಶ್ರದ್ಧೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ ಇವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ DK ಶಿವಕುಮಾರ್.ತರಾಟೆಗೆ ತೆಗೆದುಕೊಂಡರು.
ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಉತ್ತರಿಸಿದರು. ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಆರ್.ಅಶೋಕ್ ಅವರು ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, ವಿರೋಧ ಪಕ್ಷದ ನಾಯಕ ಅಶೋಕ್ ಅವರ ಹೇಳಿಕೆಗೆ ಉತ್ತರಿಸಲು ನಾನು ಇಷ್ಟ ಪಡುವುದಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಧರ್ಮ, ನಮ್ಮ ಕರ್ಮ, ಆಚಾರ ವಿಚಾರ ಅನವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ.
ನಮ್ಮ ಪಕ್ಷದ ನಾಯಕರು ಈ ವಿಚಾರವಾಗಿ ವಿಶಾಲಾರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ, ಆಚರಣೆ, ನಂಬಿಕೆಗಳು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ವಿಚಾರವಲ್ಲ ಎಂದು ಹೇಳಿದರು.