ನವದೆಹಲಿ: ಮಹಾರಾಷ್ಟ್ರ ಕೇಡರ್ನ ವಜಾಗೊಂಡ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಹುದ್ದೆ ಪಡೆಯಲು ಖೇಡ್ಕರ್ ನಕಲಿ ಒಬಿಸಿ ಮತ್ತು ಪಿಡಬ್ಲ್ಯೂಬಿಡಿ (ವಿಕಲಚೇತನ ವ್ಯಕ್ತಿಗಳು) ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪವನ್ನು ಎದುರಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಖೇಡ್ಕರ್ಗೆ ಸಂಪೂರ್ಣ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಿದ್ದು, 35 ಸಾವಿರ ರೂ. ಶೂರಿಟಿ ನೀಡುವಂತೆ ಸೂಚಿಸಿದೆ.
ಖೇಡ್ಕರ್ ಪ್ರಕರಣ ಆಲಿಸಿದ ಪೀಠ, “ಆಕೆ ಮಾಡಿರುವ ಘೋರ ತಪ್ಪು ಏನು. ಆಕೆ ಡ್ರಗ್ಗ್ ಮಾರಾಟ ಮಾಡುತ್ತಿಲ್ಲ. ಅಥವಾ ಭಯೋತ್ಪಾದಕಿ ಅಲ್ಲ. ಆಕೆ ಕೊಲೆ ಮಾಡಿಲ್ಲ. ಎನ್ಡಿಪಿಎಸ್ ಆರೋಪಿಯಲ್ಲ ಎಂದು ತಿಳಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಕೋರ್ಟ್ಗೆ ಸಂಪೂರ್ಣ ತನಿಖೆಗೆ ಸಹಕಾರ ನೀಡುವ ಮತ್ತು ಸಾಕ್ಷಿ ನಾಶ ಅಥವಾ ತಿರುಚುವ ಯತ್ನ ನಡೆಸದಂತೆ, ಷರತ್ತುಗಳ ಉಲ್ಲಂಘನೆ ಮಾಡದಂತೆ ಕೋರ್ಟ್ ಸೂಚನೆ ನೀಡಿದೆ”.
ನಕಲಿ ಪ್ರಮಾಣ ಪತ್ರ ನೀಡುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಸೇವೆಯಲ್ಲಿ ಹುದ್ದೆ ಪಡೆದಿದ್ದ ಖೇಡ್ಕರ್ಗೆ ಬಂಧನದಿಂದ ರಕ್ಷಣೆ ನೀಡಿ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ನಿರೀಕ್ಷಣಾ ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಮಾಜಿ ಅಧಿಕಾರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ವಂಚನೆ ನಡೆಸಿರುವುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಇದು ಕೇವಲ ಸಂವಿಧಾನದ ಮಂಡಳಿಗೆ ಮಾತ್ರವಲ್ಲ. ಸಮಾಜದ ದೇಶದ ಜನರಿಗೆ ವಂಚನೆ ಮಾಡಲಾಗಿದೆ ಎಂದು ತಿಳಿಸಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿತ್ತು. ಅಲ್ಲದೇ ಈ ಪಿತೂರಿನಲ್ಲಿ ಭಾಗಿಯಾಗಿರುವ ಕುರಿತು ತಿಳಿಯಲು ಅಗತ್ಯ ವಿಚಾರಣೆ ನಡೆಸುವಂತೆ ಒತ್ತಿ ಹೇಳಿತ್ತು. ಖೇಡ್ಕರ್ ಪೋಷಕರಿಬ್ಬರು ಉತ್ತಮ ಸ್ಥಾನಮಾನದ ಹುದ್ದೆ ಹೊಂದಿರುವ ಹಿನ್ನಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿತು.
ನಕಲಿ ಒಬಿಸಿ ಮತ್ತು ವಿಕಲಚೇತನ ವ್ಯಕ್ತಿಗಳು ಪ್ರಮಾಣಪತ್ರಗಳನ್ನು ನೀಡುವ ಮೂಲಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ವಂಚನೆ ಮತ್ತು ಕಾನೂನು ಅಕ್ರಮ ನಡೆಸಿದ್ದಾರೆ ಎಂದು ಖೇಡ್ಕರ್ ವಿರುದ್ಧ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.