Ad imageAd image

2028 ರ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ : ಮಸಾಲಾ ಜಯರಾಮ್

Bharath Vaibhav
2028 ರ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ : ಮಸಾಲಾ ಜಯರಾಮ್
WhatsApp Group Join Now
Telegram Group Join Now

ತುರುವೇಕೆರೆ: ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಲಿಯಲಿದ್ದೇನೆ. ಇದು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಠೇ ಸತ್ಯ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ, ಮುಂದಿನ ವಿಧಾನಸಭಾ ಚುನಾವಣೆ ತಿಂಗಳಲ್ಲಿ ನಡೆಯಬಹುದು ಅಥವಾ 2028 ರಲ್ಲಿ ನಡೆಯಬಹುದು, ಯಾವ ಕ್ಷಣದಲ್ಲಿ ಚುನಾವಣೆ ನಡೆದರೂ ನಾನೇ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಇದರಲ್ಲಿ ಯಾವುದೇ ಸಂಶಯ, ಗೊಂದಲ ಬೇಡ. ಕಾರ್ಯಕರ್ತರ ಪರಿಶ್ರಮದಿಂದ ಕಳೆದ ಮೂರು ಚುನಾವಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ. ಒಮ್ಮೆ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ವಿ.ಸೋಮಣ್ಣ ಸೇರಿದಂತೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರುಗಳು ಪಕ್ಷ ಸಂಘಟಿಸುವಂತೆ ನನಗೆ ಸೂಚಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಆರ್. ಅಶೋಕ್ ಅವರು ನುಡಿದಿದ್ದು, ಆ 150 ಸ್ಥಾನದಲ್ಲಿ ತುರುವೇಕೆರೆ ಕ್ಷೇತ್ರದ ಮಸಾಲಾ ಜಯರಾಮ್ ಸಹ ಒಬ್ಬರಾಗಿರುತ್ತಾರೆ. ಬಿಜೆಪಿ ಪಕ್ಷದಿಂದ ನಾನು ಕಣಕ್ಕಿಳಿಯುವ ಬಗ್ಗೆ ಪಕ್ಷದ ಕಡೆಯಿಂದ ನನಗೆ ಸ್ಪಷ್ಟ ನಿರ್ದೇಶನವಿದೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಅನುಮಾನ ಬೇಡ ಎಂದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಣಕ್ಕಿಳಿಯಲೇಬೇಕು, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ, ನಿಮ್ಮ ಪರ ನಿಲ್ಲುತ್ತೇವೆ ಎಂದು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸಾಕಷ್ಟು ಮಂದಿ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಃಸಿದ್ದ ಎಂದರು.

ಸದ್ಯದಲ್ಲೇ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ತದನಂತರದಲ್ಲಿ ಪಟ್ಟಣ ಪಂಚಾಯ್ತಿ ಚುನಾವಣೆ ಬರಲಿದ್ದು, ಕಾರ್ಯಕರ್ತರು ಪಕ್ಷ ಸಂಘಟನೆಯ ಕಡೆಗೆ ಹೆಚ್ಚು ಒತ್ತನ್ನು ನೀಡಬೇಕು. ತಾಪಂ, ಜಿಪಂ, ಪಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು. ಚುನಾವಣೆಯನ್ನು ಪಕ್ಷ ಏಕಾಂಗಿಯಾಗಿ ಎದುರಿಸುತ್ತದೆ ಹಾಗೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನಿಸುತ್ತದೆ. ಮೈತ್ರಿ ಅಭ್ಯರ್ಥಿ ಎಂದು ಯಾರನ್ನೂ ಯಾವುದೇ ಪಕ್ಷ ಘೋಷಿಸಿಲ್ಲ. ಮೈತ್ರಿಗೆ ನನ್ನ ವಿರೋಧವಿಲ್ಲ, ಆದರೆ ಮೈತ್ರಿ ಮುಂದುವರೆಯಬೇಕೋ? ಬೇಡವೋ? ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಎನ್.ಡಿ.ಎ. ಪಕ್ಷದ ಯಾವುದೇ ರಾಷ್ಟ್ರ, ರಾಜ್ಯ ನಾಯಕರುಗಳು ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆ ನನ್ನ ಹೆಸರನ್ನಾಗಲೀ, ಎಂ.ಟಿ.ಕೃಷ್ಣಪ್ಪನವರ ಹೆಸರನ್ನಾಗಲೀ ಘೋಷಿಸಿಲ್ಲ. ಆದ್ದರಿಂದ ಮೈತ್ರಿ ಅಭ್ಯರ್ಥಿಯ ವಿಚಾರವೇ ಅಪ್ರಸ್ತುತ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಪಕ್ಷದ ಸಂಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ, ಎಂ.ಟಿ.ಕೃಷ್ಣಪ್ಪ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ, ಅದು ಅವರ ಪಕ್ಷದ ನಿಲುವು ಇರಬಹುದು. ಜೆಡಿಎಸ್ ಪಕ್ಷದ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಮೈತ್ರಿ ವಿಚಾರದಲ್ಲಿ ಯಾವುದೇ ಘೋಷಣೆಯಾಗಿಲ್ಲ. ನಾನು ನನ್ನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ 2028 ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಸ್ಪಷ್ಟ ಎಂದರು.

ಮಸಾಲಾ ಜಯರಾಮ್ ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬುದು ಕೆಲಸವಿಲ್ಲದೆ ಟೀ ಅಂಗಡಿ ಬಳಿ ಕುಳಿತು ಕಾಲಹರಣ ಮಾಡುವವರು ಮಾಡಿರುವ ಅಪಪ್ರಚಾರ. ಈ ಅಪಪ್ರಚಾರಕ್ಕೆ ಕಾರ್ಯಕರ್ತರು ಕಿವಿಗೊಡಬಾರದು. ನನ್ನನ್ನು ಶಾಸಕನನ್ನಾಗಿ ಮಾಡಿ, ಎರಡು ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿರುವುದು ಬಿಜೆಪಿ ಪಕ್ಷ. ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಪಪಂ ಅಧ್ಯಕ್ಷೆ ಸ್ವಪ್ನನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಚಿದಾನಂದ್, ಆಶಾರಾಜಶೇಖರ್, ಶೀಲಾಶಿವಪ್ಪನಾಯಕ, ಪಕ್ಷದ ಸಂಚಾಲಕ ಹರಿಕಾರನಹಳ್ಳಿ ಪ್ರಸಾದ್, ಸಹ ಸಂಚಾಲಕ ಸೋಮೇನಹಳ್ಳಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಚೂಡಾಮಣಿ, ಜಿಪಂ ಮಾಜಿ ಸದಸ್ಯ ಉಗ್ರಯ್ಯ, ಮುಖಂಡರಾದ ಅರಳೀಕೆರೆ ಶಿವಯ್ಯ, ಮಂಜಣ್ಣ, ಬುಗುಡನಹಳ್ಳಿ ಕೃಷ್ಣಮೂರ್ತಿ, ಬಿಗನೇನಹಳ್ಳಿ ರವಿಕುಮಾರ್, ಶೋಭಾಕುಮಾರ್, ಉಮಾರಾಜ್, ತಂಡಗ ಧನಪಾಲ್, ಕಾಳಂಜೀಹಳ್ಳೀ ಸೋಮಶೇಖರ್ ಉಪಸ್ಥಿತರಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!