ಬೆಂಗಳೂರು : ಕೆಪಿಎಸ್‌ಸಿ ಪರೀಕ್ಷೆಯ ಭಾಷಾಂತರದಲ್ಲಿ ಆಗಿದ್ದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಕೆಪಿಎಸ್‌ಸಿ ಕುರಿತ ಚರ್ಚೆ, ಮರು ಪರೀಕ್ಷೆಯ ಆಗ್ರಹಕ್ಕೆ ವಿಧಾನಸಭೆಯ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.
ಪ್ರಕರಣವು ನ್ಯಾಯಾಲಯದಲ್ಲಿದ್ದು, ಮರು ಪರೀಕ್ಷೆ ಮಾಡಿ ಎಂದು ಸೂಚನೆ ಕೊಡಲು ಈಗ ಸಾಧ್ಯವಿಲ್ಲ. ಮರು ಪರೀಕ್ಷೆಗೆ ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ ಎಂದ ಸಿಎಂ, ಮರು ಪರೀಕ್ಷೆ ಬಗ್ಗೆ ಕೋರ್ಟ್ ಸೂಚನೆ ಬರದಿದ್ದರೆ ಸರ್ವ ಪಕ್ಷ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ತಪ್ಪು ಭಾಷಾಂತರದಿಂದ ಅನ್ಯಾಯಕ್ಕೆ ಒಳಗಾದವರ ಪರವಾಗಿ ನಾವಿದ್ದೇವೆ. UPSC ಮಾದರಿಯಲ್ಲಿ KPSC ಪರೀಕ್ಷೆ ನೇಮಕಾತಿ ನಡೆಸಲು ಕ್ರಮವಹಿಸಾಗುವುದು ಎಂದರು.
ಈಗಾಗಲೇ ಮುಖ್ಯ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿ, ಆಯೋಗವು ಅಧಿಸೂಚನೆ ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇರುತ್ತದೆ.
ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಈ ಹಂತದಲ್ಲಿ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳುವುದು ನ್ಯಾಯೋಚಿತವಾಗಿರಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಆಯೋಗವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಆಯೋಗಕ್ಕೆ ಸೂಚನೆ ನೀಡುತ್ತದೆ. ಈ ಹಂತದಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲು ಬರುವುದಿಲ್ಲ ಎಂದರಲ್ಲದೇ, KPSC ಪರೀಕ್ಷೆ ಲೋಪವಾಗಿರುವ ಕಡೆ, ತಪ್ಪಿತಸ್ಥರು, ಉಪ್ಪು ತಿಂದವರು ಯಾರೇ ಇದ್ದರು ನೀರು ಕುಡಿಯಲೇಬೇಕು. ಅಂತವರ ವಿರುದ್ಧ ಕ್ರಮಕ್ಕೆ ಸಿಎಂ ಇದೇ ವೇಳೆ ಸೂಚನೆ ನೀಡಿದರು.