ಮೈಸೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಲೋಕಾಯುಕ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಇದೀಗ ತಿಳಿದುಬಂದಿದೆ.
ಅಲ್ಲದೇ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸಾಕ್ಷ್ಯಾಧಾರಗಳ ಕೊರತೆ ಎಂದು ಲೋಕಾಯುಕ್ತ ಎಸ್ಪಿ ಉದೇಶ್ ಅವರಿಂದ ಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಲೋಕಾ ತನಿಖೆಯಲ್ಲಿ ಸಿಎಂಗೆ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಮತ್ತವರ ಕುಟುಂಬಕ್ಕೆ ಸದ್ಯ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇನ್ನು ಕೋರ್ಟ್ಗೆ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಲು ಸಮಯಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತ್ತು.
ಸದ್ಯ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಬಿ. ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದು, ತನಿಖೆಯ ಹಂತದಲ್ಲೇ ಇರುವಾಗಲೇ ಸಿಎಂ ಪತ್ನಿ ಬಿಎಂ ಪಾರ್ವತಿ ಸೇರಿ ನಾಲ್ವರ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ಮಾಡಲಾಗಿದೆಯಂತೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಈ ಮೊದಲು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡದ ಹೈಕೋರ್ಟ್ ಪೀಠ ವಜಾಗೊಳಿಸಿತ್ತು.