ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು (SIR) ಗುರಿಯಾಗಿಸಿಕೊಂಡು ವಿಪಕ್ಷಗಳು ನಡೆಸುತ್ತಿರುವ ತೀವ್ರ ಪ್ರತಿಭಟನೆಗಳ ಬೆನ್ನಲ್ಲೇ, ದೇಶದ 42 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.
ಚುನಾವಣಾ ಆಯೋಗ ಮತ್ತು ನ್ಯಾಯಾಂಗದಂತಹ ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡಲು ಯೋಜಿತ ಸಂಚು ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಮಾಜಿ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಚುನಾವಣಾ ವ್ಯವಸ್ಥೆ ಹಾಗೂ ಮತದಾನದ ಮೇಲಿನ ಜನಸಾಮಾನ್ಯರ ನಂಬಿಕೆ ನಶಿಸಿದಾಗ 'ಬ್ಯಾಲೆಟ್ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಬೀದಿ ಹೋರಾಟಗಳು ದೇಶವನ್ನು ವ್ಯಾಪಿಸುತ್ತವೆ' ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿಗಳ ಪತ್ರದಲ್ಲಿ ಏನಿದೆ?
ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ 'ಮತ ಕಳವು' ಎಂಬ ಗಂಭೀರ ಆರೋಪಗಳನ್ನು ಮಾಡುವುದು ಮತ್ತು ಸಂವಿಧಾನಾತ್ಮಕ ಅಧಿಕಾರಗಳನ್ನು ಸತತವಾಗಿ 'ಚೋರ್' ಅಥವಾ 'ರಾಜಿಯಾದ ಸಂಸ್ಥೆಗಳು' ಎಂದು ಕರೆಯುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಕಷ್ಟಕರ ಘಳಿಗೆಯಲ್ಲಿ ಮೌನವಾಗಿರುವುದು ತಟಸ್ಥ ನಿಲುವಾಗುವುದಿಲ್ಲ ಎಂದಿರುವ ನಿವೃತ್ತ ನ್ಯಾಯಮೂರ್ತಿಗಳು, ಭಾರತದ ಬೃಹತ್ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸುವ ಪಟ್ಟಭದ್ರ ಹಿತಾಸಕ್ತಿಗಳ ಲೇಖನ ಹಾಗೂ ರಾಜಕೀಯ ಲಾಭದ ಹೋರಾಟವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನುಬದ್ಧ ಹಾಗೂ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕ್ರಮವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.


