ಬೆಳಗಾವಿ: ಮೊದಲ ಹೆಣ್ಣು ಮಗು ಜನಿಸಿದರೆ 5000 ರೂ. ನೀಡುವ ವಿನೂತನ ಯೋಜನೆಯನ್ನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮ ಪಂಚಾಯಿತಿ ಆರಂಭಿಸಿದೆ.
ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಮತ್ತು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಮತನೂರು ಗ್ರಾಮ ಪಂಚಾಯಿತಿ ವಿನೂತನ ಹೆಜ್ಜೆ ಇರಿಸಿದ್ದು, ಮೊದಲ ಹೆಣ್ಣು ಮಗು ಜನಿಸಿದರೆ ಕುಟುಂಬಕ್ಕೆ 5000 ರೂ.ಪ್ರೋತ್ಸಾಹ ಧನ ನೀಡುವ 'ಮನೆ ಮಹಾಲಕ್ಷ್ಮಿ' ಯೋಜನೆ ಆರಂಭಿಸಿದೆ.
ಈ ಮೂಲಕ ಇಂತಹ ಯೋಜನೆಯನ್ನು ಜಾರಿಗೆ ತಂದ ರಾಜ್ಯದ ಮೊದಲ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆಯಿಂದಲೇ ಯೋಜನೆಗೆ ಪ್ರತ್ಯೇಕ ವಿಭಾಗ ಮಾಡಿ ಹಣ ಮೀಸಲಿಡಲಾಗುವುದು.
ನವಜಾತ ಹೆಣ್ಣು ಶಿಶುಗಳ ರಕ್ಷಣೆ, ಹೆಣ್ಣು ಮಗುವಿನ ಜನನ ಪ್ರೋತ್ಸಾಹಿಸುವುದು, ಹೆಣ್ಣು ಮಕ್ಕಳ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸುವುದು, ಭ್ರೂಣ ಹತ್ಯೆ ತಡೆಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು 'ಮನೆ ಮಹಾಲಕ್ಷ್ಮಿ' ಯೋಜನೆಯ ಪ್ರಮುಖ ಉದ್ದೇಶವಾಗಿದೆ.


