ಮುಂಬೈ: 65.54 ಕೋಟಿ ರೂಪಾಯಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಜನಪ್ರಿಯ ನಟ ಡಿನೊ ಮೊರಿಯಾ ಅವರನ್ನು ಮುಂಬೈನ ಆರ್ಥಿಕ ಅಪರಾಧ ಇಲಖೆ ಅಧಿಕಾರಿಗಳು ಬಂಧಿಸಿದ್ದಾರೆ.
65.54 ಕೋಟಿ ರೂಪಾಯಿ ಹಗರಣದ ತನಿಖೆಯ ಸಂಬಂಧ ನಟನನ್ನು ಅವರ ಸ್ವಗೃಹದಿಂದಲೇ ಮುಂಬೈ ಪೊಲೀಸ್ನ ಆರ್ಥಿಕ ಅಪರಾಧ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮುಂಬೈನ ಮಿಥಿ ನದಿಯ ಹೂಳು ತೆಗೆಯುವ ಮತ್ತು ನವೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಹಾಗೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.
ಮುಂಬೈನ ಬಾಂದ್ರಾದಲ್ಲಿರುವ ನಟ ಡಿನೊ ಮೊರಿಯಾ ನಿವಾಸದಲ್ಲಿ ಮುಂಬೈ ಪೊಲೀಸರು ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ನಟನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಿಎಂಸಿ (BMC) ಕಚೇರಿಗೆ ಸುಮಾರು 65.54 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಮಿಥಿ ನದಿ ಹೂಳು ತೆಗೆಯುವ ಗುತ್ತಿಗೆಗೆ ಸಂಬಂಧಿಸಿದಂತೆ ನಡೆದ ಆರ್ಥಿಕ ಅನಿಯಮಿತತೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಗರಣದಲ್ಲಿ ಗುತ್ತಿಗೆದಾರರು, ಮಧ್ಯವರ್ತಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಡಿನೊ ಮೊರಿಯಾ ಅವರನ್ನು ಈ ಹಿಂದೆ ಮೇ 2025ರಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿತ್ತು.
ತನಿಖೆಯ ವೇಳೆ ಪೊಲೀಸರಿಗೆ ದೊರೆತ ಫೋನ್ ದಾಖಲೆಗಳು ಮತ್ತು ನಟನ ಸಹೋದರ ಸ್ಯಾಂಟಿನೋ ಮೊರಿಯಾ ಅವರ 'ಯುಬಿಒ ರೈಡ್ಜ್' ಕಂಪನಿಯ ಆರ್ಥಿಕ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಈ ಹಗರಣದಲ್ಲಿ ಈಗಾಗಲೇ 2025ರಲ್ಲಿ ಬಂಧನಕ್ಕೊಳಗಾಗಿರುವ ಕೇತನ್ ಕದಮ್ ಎಂಬಾತನ ಮೇಲೆಯೂ ತನಿಖೆ ನಡೆಸಲಾಗಿದೆ.
ನದಿ ಸ್ವಚ್ಛತಾ ಕಾರ್ಯದ ಗುತ್ತಿಗೆಗಳ ಹಂಚಿಕೆ ಮತ್ತು ಅದಕ್ಕೆ ಸಂಬಂಧಿಸಿದ ಹಣಕಾಸಿನ ಪಾವತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮುಂಬೈ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.


