ಚಂದ್ರಪುರ ಜಿಲ್ಲೆಯ ಚಿಮೂರು ತಾಲೂಕಿನ ಜಂಬುಲ್‌ಘಾಟ್‌ನಲ್ಲಿರುವ ಸರ್ಕಾರಿ ಬುಡತಟ್ಟು ಆಶ್ರಮ ಶಾಲೆಯಲ್ಲಿ ಶನಿವಾರ ನಿಗದಿತ ಕ್ಷೌರ ಅವಧಿಯ ವೇಳೆ ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ಸುಮಾರ 82 ವಿದ್ಯಾರ್ಥಿಗಳಿಗೆ ಅರ್ಧ ಕ್ಷೌರ ಹಾಗೂ ಅಲ್ಲಲ್ಲಿ ಬೋಳಿಸಿದ ತಲೆಯಂತೆ ವಿಕೃತವಾಗಿ ಕೂದಲು ಕತ್ತರಿಸಿ ಶಿಕ್ಷೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕೃತ್ಯವು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆ.
ಶನಿವಾರವು ವಿದ್ಯಾರ್ಥಿಗಳಿಗೆ ದಿನನಿತ್ಯದ ಸ್ವಚ್ಛತೆ ಮತ್ತು ಶಿಸ್ತಿನ ದಿನವಾಗಿದ್ದು, ಶಾಲೆ ವತಿಯಿಂದಲೇ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ ಕ್ಷೌರ ಮಾಡುವಾಗ ವಿದ್ಯಾರ್ಥಿಗಳ ಕೂದಲನ್ನು ಅರ್ಧ ಮಾತ್ರ ಕತ್ತರಿಸಲಾಗಿದ್ದು, ಅವರಿಗೆ ಅಸಮ ಹಾಗೂ ಅರ್ಧ ಬೋಳಿಸಿದ ವಿಚಿತ್ರ ನೋಟವನ್ನು ನೀಡಲಾಗಿದೆ. ಮಕ್ಕಳ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಭುಗಿಲೆದ್ದಿದೆ.
ಫೋಟೋಗಳು ವೈರಲ್ ಆದ ನಂತರ ಉನ್ನತ ಕಚೇರಿಯ ಅಧಿಕಾರಿಗಳು ಶಾಲೆಯನ್ನು ಸಂಪರ್ಕಿಸಿ ಕೂಡಲೇ ವಿದ್ಯಾರ್ಥಿಗಳ ಕೂದಲನ್ನು ಸಮವಾಗಿ ಕತ್ತರಿಸುವಂತೆ ಸೂಚನೆ ನೀಡಿದ್ದಾರೆ.
ಅದರಂತೆ ಅಂದೇ ಆ ಸೂಚನೆಯನ್ನು ಪಾಲಿಸಲಾಗಿದೆ. ಅಲ್ಲದೆ ಶಾಲೆಯ ಮುಖ್ಯೋಪಾಧ್ಯಾಯರು ಅಧೀಕ್ಷಕರಿಗೆ (Superintendent) ಶೋಕಾಸ್ ನೋಟು ಜಾರಿ ಮಾಡಿದ್ದಾರೆ.
ಮತ್ತೊಂದೆಡೆ ಶಾಲೆಯ ಕಡೆಯಿಂದ ವಿಭಿನ್ನ ಸಮರ್ಥನೆಗಳು ಕೇಳಿಬಂದಿವೆ. ಮಕ್ಕಳ ಸ್ವಚ್ಛತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು ಎಂದೂ, ಮಳೆಯ ಕಾರಣದಿಂದ ಕ್ಷೌರ ಕಾರ್ಯವು ವಿಳಂಬವಾಯಿತು ಎಂದೂ ಅಧೀಕ್ಷಕರು ತಿಳಿಸಿದ್ದಾರೆ. ಟ್ರಿಮ್ಮರ್‌ನಲ್ಲಿ ಚಾರ್ಜ್ ಖಾಲಿಯಾದ ಕಾರಣ ಕ್ಷೌರ ಅರ್ಧಕ್ಕೆ ನಿಂತುಹೋಯಿತು ಎಂದು ಶಾಲಾ ಅಧಿಕಾರಿಗಳು ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳ ತುಂಟಾಟ ಹಾಗೂ ಆಟಾಟೋಪಗಳಿಂದ ಸಿಟ್ಟಿಗೆದ್ದ ಅಧೀಕ್ಷಕರು ಈ ರೀತಿಯ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದ್ದು, ಶಾಲೆಯು ನೀಡಿರುವ ಸ್ಪಷ್ಟನೆಯು ಯಾರನ್ನೂ ತೃಪ್ತಿಪಡಿಸಿಲ್ಲ.
ಪೋಸ್ಟರ್ ಹಾಗೂ ಕಾಗದಪತ್ರಗಳ ಮೂಲಕ ಕೇವಲ ನೋಟಿಸ್ ನೀಡುವುದು ಸಾಲದು ಎಂದು ಪೋಷಕರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಶಾಲೆಗಳಲ್ಲಿ ಇಂತಹ ಅವಮಾನಕರ ಶಿಕ್ಷೆಗಳಿಗೆ ಯಾವುದೇ ಸ್ಥಾನವಿರಬಾರದು ಎಂದು ವಾದಿಸಿರುವ ಅವರು, ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


