ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಅತ್ಯಂತ ಅಪರೂಪದ ವೈದ್ಯಕೀಯ ಪವಾಡವೊಂದು ಸಂಭವಿಸಿದೆ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ (ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು) ನಾರ್ಮಲ್ ಡೆಲಿವರಿ ಮೂಲಕ ಜನ್ಮ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಅಚ್ಚರಿಯ ಘಟನೆಯ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಸಂಭಲ್ ಜಿಲ್ಲೆಯ ಓವರಿ ಗ್ರಾಮದ ನಿವಾಸಿಯಾದ ಅಮಿನಾ ಎಂಬ ಮಹಿಳೆ ಮೊರಾದಾಬಾದ್‌ನ ಲೋಧಿಪುರ ಪ್ರದೇಶದಲ್ಲಿರುವ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಮೇ 9 ರಂದು ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು.
ಇದಾದ ಬಳಿಕ ಅಚ್ಚರಿ ಎಂಬಂತೆ ಐದು ದಿನಗಳ ನಂತರ, ಅಂದರೆ ಮೇ 14 ರಂದು ಉಳಿದ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತೀವ್ರ ಆರೋಗ್ಯದ ಅಪಾಯವಿರುವ (ಹೈ-ರಿಸ್ಕ್) ಗರ್ಭಧಾರಣೆ ಇದಾಗಿದ್ದರೂ ಸಹ, ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ (ಸಿಜೇರಿಯನ್) ಇಲ್ಲದೆ ನಾಲ್ಕೂ ಮಕ್ಕಳನ್ನು ಸಹಜ ಹೆರಿಗೆಯ ಮೂಲಕವೇ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅಪರೂಪದ ಹೆರಿಗೆಯ ನೇತೃತ್ವ ವಹಿಸಿದ್ದ ಡಾ. ಶುಭ್ರಾ ಅಗರ್ವಾಲ್ ಮಾತನಾಡಿ, ಆಸ್ಪತ್ರೆಯ ಇತಿಹಾಸದಲ್ಲೇ ನಾಲ್ಕು ಅವಳಿ-ಜವಳಿ (ಕ್ವಾಡ್ರುಪ್ಲೆಟ್ಸ್) ಮಕ್ಕಳನ್ನು ನಾರ್ಮಲ್ ಡೆಲಿವರಿ ಮೂಲಕ ಹೆರಿಸಿದ ಮೊದಲ ಪ್ರಕರಣ ಇದಾಗಿದೆ ಎಂದಿದ್ದಾರೆ.
ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕೂ ನವಜಾತ ಶಿಶುಗಳನ್ನು ವೆಂಟಿಲೇಟರ್ ಆಸರೆಯಲ್ಲಿ ಇರಿಸಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಹಾಗೆಯೇ ತಾಯಿ ಅಮಿನಾ ಕೂಡ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಗರ್ಭಧಾರಣೆಯ ಮೂರನೇ ತಿಂಗಳಲ್ಲೇ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಹೊಟ್ಟೆಯಲ್ಲಿ ನಾಲ್ಕು ಭ್ರೂಣಗಳಿರುವುದು ಪತ್ತೆಯಾಗಿತ್ತು. ಅಂದಿನಿಂದಲೇ ವೈದ್ಯರ ವಿಶೇಷ ತಂಡವು ಅಮಿನಾ ಅವರ ಆರೋಗ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿತ್ತು.

