ನವದೆಹಲಿ : 3ಎಂ ಹರುನ್ ಇಂಡಿಯಾ ರಿಚ್ ಲಿಸ್ಟ್ 2026 ಬಿಡುಗಡೆಯಾಗಿದ್ದು, ಅದಾನಿ ಗುಂಪಿನ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅದಾನಿ ಕುಟುಂಬದ ಸಂಪತ್ತು ಶೇಕಡಾ 13 ರಷ್ಟು ಏರಿಕೆಯಾಗಿ ಒಟ್ಟು 9.23 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ ದೀರ್ಘಕಾಲ ಅಗ್ರಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಶೇಕಡಾ 10 ರಷ್ಟು ಕುಸಿತದೊಂದಿಗೆ 8.63 ಲಕ್ಷ ಕೋಟಿ ರೂಪಾಯಿಗಳ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದೆ.
ಈ ವರ್ಷದ ಹರುನ್ ಪಟ್ಟಿಯಲ್ಲಿ ಕನಿಷ್ಠ 1,000 ಕೋಟಿ ರೂ. ಆಸ್ತಿ ಹೊಂದಿರುವ ಒಟ್ಟು 1,810 ವ್ಯಕ್ತಿಗಳು ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಸಂಪತ್ತು ಶೇಕಡಾ 12.8 ರಷ್ಟು ಹೆಚ್ಚಾಗಿ 187.5 ಲಕ್ಷ ಕೋಟಿ ರೂ. ಮುಟ್ಟಿದ್ದು, ಇದು ಭಾರತದ ಒಟ್ಟು ಜಿಡಿಪಿಯ ಅರ್ಧಭಾಗದಷ್ಟಿದೆ. ಭಾರತದಲ್ಲಿ ಈಗ ಒಟ್ಟು 391 ಡಾಲರ್ ಬಿಲಿಯನೇರ್‌ಗಳಿದ್ದಾರೆ. ಕಳೆದ ವರ್ಷವೊಂದರಲ್ಲೇ ಹೊಸದಾಗಿ 27 ಮಂದಿ ಬಿಲಿಯನೇರ್‌ಗಳು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.


