ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಮಳೆ ಹಾಗೂ ಗುಡುಗು ಸಹಿತ ಬಿರುಗಾಳಿ ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದ್ದು, ಮಧ್ಯಾಹ್ನ 3:30 ರಿಂದ 4:30 ರ ನಡುವಿನ ಕೇವಲ ಒಂದು ಗಂಟೆಯ ಅವಧಿಯಲ್ಲಿ ಒಟ್ಟು 9 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಯ ಹಲವು ಭಾಗಗಳಿಗೆ ಭಾರೀ ಮಳೆಯ 'ರೆಡ್ ಅಲರ್ಟ್' ಎಚ್ಚರಿಕೆಯನ್ನು ನೀಡಿದೆ.
ಬೇರೆಡೆಗೆ ತಿರುಗಿದ ವಿಮಾನಗಳು
ದೆಹಲಿಯ ವಿಮಾನ ನಿಲ್ದಾಣದ ಆವರಣ ಹಾಗೂ ರನ್‌ವೇ ಭಾಗದಲ್ಲಿ ನೀರು ನಿಂತ ಪರಿಣಾಮ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಕಷ್ಟಸಾಧ್ಯವಾಯಿತು.
ಇದರಿಂದಾಗಿ ನಾಲ್ಕು ವಿಮಾನಗಳನ್ನು ಜೈಪುರಕ್ಕೆ, ಮತ್ತ ನಾಲ್ಕು ವಿಮಾನಗಳನ್ನು ಲಕ್ನೋಗೆ ಹಾಗೂ ಒಂದು ವಿಮಾನವನ್ನು ಅಹಮದಾಬಾದ್‌ಗೆ ತುರ್ತಾಗಿ ಡೈವರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


