ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧದ ಅಸ್ಥಿರತೆ, ಕಚ್ಚಾತೈಲ ಬೆಲೆಯಲ್ಲಿನ ಏರಿಕೆ ಮತ್ತು ಹಣದುಬ್ಬರದ ಭೀತಿಯ ನಡುವೆಯೂ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ನಿರಾಸೆ ಮೂಡಿದ್ದು, ಬೆಲೆಗಳು ತೀವ್ರ ಕುಸಿತ ಕಂಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಇದರ ಬಿಸಿ ತಟ್ಟಿದೆ.ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆಯು ಬರೋಬ್ಬರಿ 5,500 ರೂ.ಗಳಿಗೂ ಅಧಿಕ ನಷ್ಟ ಅನುಭವಿಸಿದೆ.
ಅಕ್ಟೋಬರ್ 23ರ ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಬರೋಬ್ಬರಿ 1,900 ರೂ.ಗಳಷ್ಟು ಕುಸಿದು, 1,42,480 ರೂಪಾಯಿಗೆ ತಲುಪಿದೆ.
ಇದರೊಂದಿಗೆ 1 ಗ್ರಾಂ ಶುದ್ಧ ಚಿನ್ನದ ಬೆಲೆ 14,248 ರೂಪಾಯಿ ದಾಖಲಾಗಿದೆ. ಜಾಗತಿಕ ಆರ್ಥಿಕ ಬದಲಾವಣೆಗಳ ನೇರ ಪ್ರಭಾವವು ಈ ಇಳಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.


