ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾರಕ ಮಾಂಜಾ ದಾರದ ಹಾವಳಿ ಮುಂದುವರಿದಿದ್ದು, ನಿನ್ನೆ ಅಷ್ಟೇ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕನೊಬ್ಬನ ಮೂಗಿಗೆ ಮಾಂಜಾ ದಾರ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಬಳಿ ವರದಿಯಾಗಿದೆ.
ತಕ್ಷಣವೇ ಎಚ್ಚೆತ್ತ ಸ್ಥಳೀಯರು ಹಾಗೂ ಸಾರ್ವಜನಿಕರು ಗಾಯಾಳು ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ತುರ್ತು ಶಸ್ತ್ರಚಿಕಿತ್ಸೆ ಮುಂದುವರಿದಿದೆ.
ಸತತವಾಗಿ ಸಂಭವಿಸುತ್ತಿರುವ ಈ ಸರಣಿ ದುರ್ಘಟನೆಗಳಿಂದ ಸಾರ್ವಜನಿಕರಲ್ಲಿ ಮತ್ತು ದ್ವಿಚಕ್ರ ವಾಹನ ಸವಾರರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಕೇವಲ ಗಾಳಿಪಟ ಹಾರಿಸಲು ಬಳಸುವ ಈ ಅಕ್ರಮ ಚೀನಿ ಹಾಗೂ ನೈಲಾನ್ ಮಾಂಜಾ ದಾರಗಳು ರಸ್ತೆಯಲ್ಲಿ ಸಂಚರಿಸುವ ಅಮಾಯಕರ ಜೀವಕ್ಕೆ ಕುತ್ತು ತರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಈ ಸರಣಿ ಅವಘಡಗಳು ಮತ್ತು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಎಚ್ಚೆತ್ತ ಧಾರವಾಡ ಹಾಗೂ ಹುಬ್ಬಳ್ಳಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಧಾರವಾಡದಲ್ಲಿ ವಿವಿಧ ಅಂಗಡಿಗಳ ಮೇಲೆ ದಿಢೀರ್ ದಾಳಿ (ರೈಡ್) ನಡೆಸಿದ ಪೊಲೀಸರು, ನಿಷೇಧಿತ ಸುಮಾರು 500ಕ್ಕೂ ಹೆಚ್ಚು ವಿವಿಧ ಮಾದರಿಯ ಮಾಂಜಾ ದಾರಗಳ ಬಂಡಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಮಾರಕ ದಾರಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


