ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ 'ಸಿಮ್ ಬಾಕ್ಸ್' ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಹಾಗೂ ದೂರಸಂಪರ್ಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಭೇದಿಸಿದ್ದಾರೆ.
ಈ ಹೈಟೆಕ್ ಅಕ್ರಮ ಜಾಲದಲ್ಲಿ ಏರ್‌ಟೆಲ್ ಕಂಪನಿಯ ಸಿಮ್ ಕಾರ್ಡ್‌ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಬೆಂಗಳೂರಿನ ಕಾಡುಗೋಡಿ ಹಾಗೂ ಪಟ್ಟಂದೂರು ಅಗ್ರಹಾರ ಪ್ರದೇಶಗಳ ಅಪಾರ್ಟ್‌ಮೆಂಟ್‌ಗಳನ್ನು ಅಡ್ಡ ಕಟ್ಟಿಕೊಂಡು ಈ ಸೈಬರ್ ದಂಧೆ ನಡೆಸಲಾಗುತ್ತಿತ್ತು. ದಾಳಿ ನಡೆಸಿದ ವೇಳೆ ಕಾಡುಗೋಡಿಯ ಅಪಾರ್ಟ್‌ಮೆಂಟ್‌ನಲ್ಲಿ 192 ಸಿಮ್ ಕಾರ್ಡ್‌ಗಳನ್ನು ಏಕಕಾಲಕ್ಕೆ ಬಳಸಬಹುದಾದ 6 ಸಿಮ್ ಬಾಕ್ಸ್‌ಗಳು ಪತ್ತೆಯಾಗಿವೆ.
ಅದೇ ರೀತಿ ಪಟ್ಟಂದೂರು ಅಗ್ರಹಾರದ ತಾಣದಲ್ಲಿ 128 ಸಿಮ್‌ಗಳ ಸಾಮರ್ಥ್ಯದ 4 ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡೂ ಕಡೆಗಳಿಂದ ಒಟ್ಟು 10 ಸಿಮ್ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ಇವೆಲ್ಲಕ್ಕೂ ಏರ್‌ಟೆಲ್ ಸಿಮ್‌ಗಳನ್ನು ಅನಧಿಕೃತವಾಗಿ ಜೋಡಿಸಲಾಗಿತ್ತು.


