ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರಕ್ಕೆ ಮತ್ತೊಂದು ಜೀವ ಬಲಿಯಾಗಿದೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿದ ಪರಿಣಾಮ ಅವರು ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಿದ್ಯಾ ಮಂಜುನಾಥ ಗೌಡರ (38) ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿ ನಗರದ ಭರತ್ ನಗರದ ನಿವಾಸಿಯಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೆಲಸದ ನಿಮಿತ್ತ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಗಾಳಿಪಟಕ್ಕೆ ಬಳಸುವ ಮಾಂಜಾ ದಾರ ಮಹಿಳೆಯ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ.
ಇದರಿಂದ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಕಿಮ್ಸ್ ಗೆ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಭೇಟಿ ನೀಡಿದ್ದಾರೆ.ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.


