ಬೆಂಗಳೂರು: ಅಣ್ಣ-ತಂಗಿ ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಕಿಟಕಿಯಿಂದ ಬಂದ ನಾಗರಹಾವೊಂದು (Cobra) ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿದ್ದನ್ನು ಕಂಡು ಇಡೀ ಕುಟುಂಬವೇ ಆಘಾತಕ್ಕೊಳಗಾದ (Shocking) ಘಟನೆ ನಗರದ ಬಾಗಲಗುಂಟೆ ಸಮೀಪದ ಭೈರವೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ.
ತೆರೆದಿದ್ದ ಕಿಟಕಿಯ ಮೂಲಕ ಬೆಡ್ರೂಂ ಸೇರಿದ ವಿಷಸರ್ಪ
ಭೈರವೇಶ್ವರ ನಗರದ ಮನೆಯೊಂದರಲ್ಲಿ ಬುಧವಾರ ರಾತ್ರಿ ತಂಪಾದ ಗಾಳಿಗಾಗಿ ಕೊಠಡಿಯ ಕಿಟಕಿಯನ್ನು ತೆರೆದಿಡಲಾಗಿತ್ತು. ಆದರೆ ಅದೇ ಕಿಟಕಿಯ ಮೂಲಕ ಮನೆ ಪ್ರವೇಶಿಸಿದ ನಾಗರಹಾವು, ನೇರವಾಗಿ ಅಣ್ಣ ಮತ್ತು ತಂಗಿ ಮಲಗಿದ್ದ ಮಂಚವನ್ನೇ ಆಶ್ರಯಿಸಿದೆ. ರಾತ್ರಿ ಇಡೀ ಇಬ್ಬರ ಮೈಮೇಲೂ ಈ ವಿಷಪೂರಿತ ಹಾವು ಸರಾಗವಾಗಿ ಹರಿದಾಡಿದೆ. ಆದಾಗ್ಯೂ ಕತ್ತಲೆಯಲ್ಲಿ ಇಲಿ ಓಡಾಡುತ್ತಿರಬಹುದು ಎಂದು ಭಾವಿಸಿದ ಇಬ್ಬರೂ ಯಾವುದೇ ಆತಂಕವಿಲ್ಲದೆ ನಿದ್ದೆಗೆ ಜಾರಿದ್ದರು.
ಬೆಳಗ್ಗೆ ನಿದ್ರೆಯಿಂದ ಎದ್ದ ಬಳಿಕ ಹಾಸಿಗೆ ಸರಿಪಡಿಸಲು ಹೋದಾಗ ಅಸಲಿ ಆಘಾತ ಎದುರಾಗಿದೆ. ತಲೆದಿಂಬನ್ನು ಪಕ್ಕಕ್ಕೆ ಸರಿಸುತ್ತಿದ್ದಂತೆ ಅದರ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಬೃಹತ್ ನಾಗರಹಾವು ಕಣ್ಣಿಗೆ ಬಿದ್ದಿದೆ. ರಾತ್ರಿ ಇಡೀ ಪ್ರಾಣಾಪಾಯದ ದವಡೆಯಲ್ಲೇ ಕಾಲ ಕಳೆದಿದ್ದನ್ನು ಅರಿತ ಅಣ್ಣ-ತಂಗಿ ಬೆಚ್ಚಿಬಿದ್ದಿದ್ದು, ಕುಟುಂಬಸ್ಥರಲ್ಲೂ ತೀವ್ರ ಆತಂಕ ಮನೆಮಾಡಿತ್ತು.


