ನವದೆಹಲಿ : ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
ವಿಶೇಷವೆಂದರೆ, ಇದೇ ವಾರದಲ್ಲೇ ಸಿಎನ್‌ಜಿ ದರವನ್ನು 2 ರೂಪಾಯಿ ಹೆಚ್ಚಿಸಲಾಗಿತ್ತು, ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಈ ಹೊಸ ಏರಿಕೆಯೊಂದಿಗೆ ದೆಹಲಿಯಲ್ಲಿ ಸಿಎನ್‌ಜಿ ದರ ಈಗ ಪ್ರತಿ ಕೆಜಿಗೆ ₹83.09 ಕ್ಕೆ ತಲುಪಿದೆ.
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಈ ಪರಿಷ್ಕೃತ ದರಗಳನ್ನು ಜಾರಿಗೆ ತಂದಿದ್ದು, ಇತ್ತೀಚಿನ ದಿನಗಳಲ್ಲಿ ಸರಣಿ ದರ ಏರಿಕೆ ಕಾಣುತ್ತಿರುವುದು ವಾಹನ ಚಾಲಕರು ಮತ್ತು ಸಾರ್ವಜನಿಕ ಸಾರಿಗೆ ಅವಲಂಬಿತರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಆಟೋ, ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಪ್ರಯಾಣ ದರವೂ ದುಬಾರಿಯಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆ ಮತ್ತು ನೈಸರ್ಗಿಕ ಅನಿಲದ ಆಮದು ವೆಚ್ಚ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

