ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಟ, ರಾಜಕಾರಣಿ ಜೋಸೆಫ್ ವಿಜಯ್ ಅವರು ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.
ಸಾರ್ವಜನಿಕ ಕಲ್ಯಾಣ ಮತ್ತು ಯುವ ಪೀಳಿಗೆಯ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಮದ್ಯ ಖರೀದಿ ಮತ್ತು ಮಾರಾಟಕ್ಕೆ ಇರಬೇಕಾದ ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ನಿಗದಿಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಈ ಹಿಂದೆ ಮದ್ಯಪಾನಕ್ಕೆ ಸಂಬಂಧಿಸಿದ ವಯೋಮಿತಿಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸರ್ಕಾರ, ಈಗ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ. ಯುವ ಸಮೂಹವು ಅಮಲು ಪದಾರ್ಥಗಳ ವ್ಯಸನಕ್ಕೆ ಬಲಿಯಾಗುವುದನ್ನು ತಡೆಯಲು ಮತ್ತು ಶಿಸ್ತುಬದ್ಧ ಸಮಾಜ ನಿರ್ಮಾಣ ಮಾಡಲು ಈ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ವಿಜಯ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

