ಬೆಂಗಳೂರು: ಮೃತ ಸರ್ಕಾರಿ ನೌಕರರನ್ನು ನಂಬಿಕೊಂಡಿದ್ದ ವಿವಾಹಿತ ಪುತ್ರಿಯರಿಗೂ ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೃತ ನೌಕರರೊಂದಿಗೆ ವಾಸಿಸುತ್ತಾ, ಅವರನ್ನೇ ಅವಲಂಬಿಸಿದ್ದರೆ ಅಂತಹ ವಿವಾಹಿತ ಹೆಣ್ಣುಮಕ್ಕಳಿಗೆ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಚಿತ್ರದುರ್ಗದ ಜೋಗಿಮಟ್ಟಿ ನಿವಾಸಿ ಆರ್. ಸವಿತಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜೆ. ಪಂಡಿತ್ ಹಾಗೂ ಕೆ. ರಾಜೇಶ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಈ ಮೂಲಕ ಈ ಹಿಂದೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕರ್ನಾಟಕ ನಾಗರೀಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ತಿದ್ದುಪಡಿಯ ಪ್ರಕಾರ, 'ಕುಟುಂಬ' ಮತ್ತು 'ಅವಲಂಬಿತರು' ಎಂಬ ಪದಗಳ ವ್ಯಾಖ್ಯಾನ ವಿಶಾಲವಾಗಿದೆ.
ಮೃತ ಸರ್ಕಾರಿ ನೌಕರನನ್ನೇ ನಂಬಿಕೊಂಡಿರುವ ಹೆಣ್ಣುಮಗಳು ಅವಿವಾಹಿತಳಾಗಿರಲಿ, ವಿವಾಹಿತಳಾಗಿರಲಿ, ವಿಚ್ಛೇದಿತಳಾಗಿರಲಿ ಅಥವಾ ವಿಧವೆಯಾಗಿರಲಿ, ಅವರೆಲ್ಲರೂ ಅನುಕಂಪದ ನೌಕರಿಗೆ ಅರ್ಹರಾಗುತ್ತಾರೆ.
ಈ ನಿಯಮವು ಮೊದಲಿನಿಂದಲೂ ಅನ್ವಯವಾಗಲಿದ್ದು, ಕೇವಲ 'ಮದುವೆಯಾಗಿದೆ' ಎಂಬ ಒಂದೇ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲು ಬರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ತಾಯಿ ನಿವೃತ್ತ ಸರ್ಕಾರಿ ನೌಕರರಾಗಿದ್ದು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣವನ್ನು ನೀಡಿ ಇಲಾಖೆಯು ಉದ್ಯೋಗ ನೀಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ವಿವಾಹಿತ ಪುತ್ರಿಯು ಇತರೆ ಎಲ್ಲಾ ಕಾನೂನಾತ್ಮಕ ಅರ್ಹತೆಗಳನ್ನು ಹೊಂದಿದ್ದರೆ, ಆಕೆಯನ್ನು ಅನುಕಂಪದ ನೇಮಕಾತಿಗೆ ಪರಿಗಣಿಸಲೇಬೇಕು ಎಂದು ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ನ್ಯಾಯಾಲಯವು ಖಡಕ್ ನಿರ್ದೇಶನ ನೀಡಿದೆ.


