ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ಮಾಪಕ (Sandalwood) ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮಾಜಿ ಅಧ್ಯಕ್ಷರಾದ (Breaking) ಭಾಮಾ ಹರೀಶ್ (Tragedy) ಅವರ ಪುತ್ರ ಉಲ್ಲಾಸ್ (29) ಅವರು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ಮದುವೆಯಾಗಬೇಕಿದ್ದ ಯುವಕನ ಹಠಾತ್ ಸಾವು ಇಡೀ ಕುಟುಂಬ ಹಾಗೂ ಸ್ಯಾಂಡಲ್‌ವುಡ್ ವಲಯವನ್ನು ತೀವ್ರ ಆಘಾತಕ್ಕೆ ದೂಡಿದೆ.
ಬೆಟ್ಟ ಹತ್ತುವ ವೇಳೆ ಹೃದಯಾಘಾತ
ಲಭ್ಯವಾಗಿರುವ ಮಾಹಿತಿ ಪ್ರಕಾರ, ಉಲ್ಲಾಸ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಕೊಡಚಾದ್ರಿ ಬೆಟ್ಟಕ್ಕೆ ಚಾರಣ (Treking) ಕೈಗೊಂಡಿದ್ದರು. ಬೆಟ್ಟ ಹತ್ತುವ ವೇಳೆ ಅವರಿಗೆ ಹಠಾತ್ತನೆ ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಟ್ಟದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ನಿವಾಸಕ್ಕೆ ತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮೃತ ಉಲ್ಲಾಸ್ ಅವರಿಗೆ ಇತ್ತೀಚೆಗಷ್ಟೇ ಅತ್ಯಂತ ಸಡಗರದಿಂದ ನಿಶ್ಚಿತಾರ್ಥ ನೆರವೇರಿತ್ತು. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲು ಎರಡು ಕುಟುಂಬಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದವು.
ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕ ಅಷ್ಟರಲ್ಲೇ ಇಹಲೋಕ ತ್ಯಜಿಸಿರುವುದು ನೋವುಂಟು ಮಾಡಿದೆ.
ಭಾಮಾ ಹರೀಶ್ ಅವರ ಮಗನ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು, ನಿರ್ಮಾಪಕರು ಹಾಗೂ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದು, ಶೋಕತಪ್ತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ.


