ಹಾವೇರಿ: ರಾಜ್ಯದ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತೆ ಕೊಡಗು, ಧಾರವಾಡ ಹಾಗೂ ಹಾವೇರಿ ಜಿಲ್ಲಾ ನ್ಯಾಯಾಲಯಗಳಿಗೆ (District Court) ಅಪರಿಚಿತರಿಂದ ಮತ್ತೊಮ್ಮೆ ಬಾಂಬ್ ಬೆದರಿಕೆ ಕರೆ ಹಾಗೂ ಇಮೇಲ್ ಸಂದೇಶಗಳು ಬಂದಿವೆ.
ಸರಣಿ ಬೆದರಿಕೆಗಳಿಂದಾಗಿ ಮೂರೂ ಜಿಲ್ಲೆಗಳ ಕೋರ್ಟ್ ಆವರಣದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಹಾವೇರಿ: ಮಧ್ಯಾಹ್ನ 2:15ಕ್ಕೆ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ; ಸೋಮವಾರಕ್ಕೆ ಕಲಾಪ ಮುಂದೂಡಿಕೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಇದು ಎರಡನೇ ಬಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕರೆ ಬಂದ ವಿಷಯ ತಿಳಿಯುತ್ತಿದ್ದಂತೆಯೇ ನ್ಯಾಯಾಲಯದ ಕಲಾಪಗಳನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಆತಂಕಗೊಂಡ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಲಯದ ಸಿಬ್ಬಂದಿ ಒಮ್ಮೆಲೇ ಕಟ್ಟಡದಿಂದ ಹೊರಗೆ ಓಡಿ ಬಂದಿದ್ದಾರೆ.
ದುಷ್ಕರ್ಮಿಗಳು ಮಧ್ಯಾಹ್ನ 2:15ಕ್ಕೆ ಬಾಂಬ್ ಸ್ಫೋಟಿಸುವುದಾಗಿ ನಿಖರ ಸಮಯ ಉಲ್ಲೇಖಿಸಿ ಬೆದರಿಕೆ ಹಾಕಿದ್ದರಿಂದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಹಾವೇರಿ ನಗರ ಠಾಣೆ ಪೊಲೀಸರು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿ ಕೋರ್ಟ್ ಕಟ್ಟಡ, ಕಚೇರಿಗಳು ಹಾಗೂ ಪಾರ್ಕಿಂಗ್ ಪ್ರದೇಶ ಸೇರಿದಂತೆ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸುತ್ತಿದ್ದಾರೆ.
ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಶನಿವಾರದ ಕಲಾಪಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರೆಯ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಕೊಡಗು: ಮಡಿಕೇರಿ ಕೋರ್ಟ್ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ಇಮೇಲ್; ಮಕ್ಕಳನ್ನು ಮನೆಗೆ ಕಳಿಸಿದ ಸಿಬ್ಬಂದಿ
ಇತ್ತ ಮಡಿಕೇರಿ ನಗರದ ಹೊರವಲಯದಲ್ಲಿರುವ ಜಿಲ್ಲಾ ನ್ಯಾಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೂ ಅಪರಿಚಿತರಿಂದ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ.
ಶಾಲೆಯ ಆವರಣದಲ್ಲೇ ಬಾಂಬ್ ಇಡಲಾಗಿದೆ ಎಂಬ ಸಂದೇಶದಿಂದ ಪೋಷಕರು ಮತ್ತು ಶಾಲಾ ಸಿಬ್ಬಂದಿ ಕೆಲಕಾಲ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಮುಂಜಾಗ್ರತಾ ಕ್ರಮವಾಗಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ತಕ್ಷಣವೇ ಸುರಕ್ಷಿತವಾಗಿ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.
ನಂತರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶಾಲಾ ಆವರಣ ಹಾಗೂ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಜಂಟಿಯಾಗಿ ಪೂರ್ಣ ಪ್ರಮಾಣದ ಸರ್ಚ್ ಆಪರೇಷನ್ ನಡೆಸಿದ್ದಾರೆ.
ಧಾರವಾಡ: 8 ದಿನದಲ್ಲಿ 3ನೇ ಬಾರಿ ಬೆದರಿಕೆ; 'ಅನ್ನನಾಥಮ್ ಅರಿಯಪ್ಪನ್' ಹೆಸರಲ್ಲಿ ಬಂದ ಮೇಲ್!
ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಕಳೆದ ಎಂಟು ದಿನಗಳ ಅವಧಿಯಲ್ಲಿ ಇದು ಮೂರನೇ ಬಾಂಬ್ ಬೆದರಿಕೆ ಸಂದೇಶವಾಗಿದೆ.
ಪ್ರತಿ ಬಾರಿಯೂ ಇ-ಮೇಲ್ ಮುಖಾಂತರವೇ ಬೇರೆ ಬೇರೆ ಹೆಸರುಗಳಲ್ಲಿ ಈ ಬೆದರಿಕೆಗಳನ್ನು ಕಳುಹಿಸಲಾಗುತ್ತಿದೆ. ಈ ಬಾರಿ "ಅನ್ನನಾಥಮ್ ಅರಿಯಪ್ಪನ್" ಎಂಬ ಹೆಸರಿನ ಇ-ಮೇಲ್ ಐಡಿಯಿಂದ ಸಂದೇಶ ರವಾನೆಯಾಗಿದೆ.
ಇ-ಮೇಲ್‌ನಲ್ಲೇನಿದೆ?:
"ಆದಷ್ಟು ಬೇಗ ನ್ಯಾಯಾಲಯದಲ್ಲಿ ಬಾಂಬ್ ಸಿಡಿಯಲಿದೆ. ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯಾಧೀಶರು ಕಣ್ಣು, ಮೂಗು ಮುಚ್ಚಿ ಕುಳಿತಿದ್ದಾರೆ. ಮೂರು ಗಂಟೆಯಲ್ಲಿ ಬಾಂಬ್ ಸಿಡಿಯಲಿದ್ದು, ಅದು ನನ್ನ ಕೈಯಲ್ಲಿಲ್ಲ" ಎಂದು ಇ-ಮೇಲ್‌ನಲ್ಲಿ ಬರೆಯಲಾಗಿದೆ.
ಎಂಟು ದಿನಗಳಲ್ಲಿ ಮೂರನೇ ಬಾರಿಗೆ ಇಂತಹದ್ದೇ ಸಂದೇಶ ಬಂದಿರುವುದರಿಂದ ಶನಿವಾರ ಕೂಡ ಪೊಲೀಸರು ಮತ್ತು ಶ್ವಾನದಳದ ಸಿಬ್ಬಂದಿ ಇಡೀ ಕೋರ್ಟ್ ಆವರಣವನ್ನು ಜಾಲಾಡಿದ್ದಾರೆ.
ಪದೇ ಪದೇ ಇಂತಹ ನಕಲಿ ಕರೆ ಹಾಗೂ ಇಮೇಲ್‌ಗಳ ಮೂಲಕ ಸಾರ್ವಜನಿಕ ಶಾಂತಿ ಕದಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತನಿಖೆ ಕೈಗೊಂಡಿದ್ದಾರೆ.


