ಬಾಗಲಕೋಟೆ : ಗಣೇಶ ಹಬ್ಬದ ಬಂದೋಬಸ್ತ್ ಕರ್ತವ್ಯದ ವೇಳೆ ಬಾದಾಮಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಕಳುವಾಗಿದ್ದ 19 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಅಧೀಕ್ಷಕರು ಬಾಗಲಕೋಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ, ಹುನಗುಂದ ಉಪವಿಭಾಗದ ಡಿವೈಎಸ್‌ಪಿ ಸಂತೋಷ ಬನಹಟ್ಟಿ, ಬಾದಾಮಿ ವೃತ್ತದ ಸಿಪಿಐ ಕೆ.ಎಸ್. ಬನ್ನೆ, ಬಾದಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಕೆ ನರಳೆ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎನ್ ಎಲ್ ವಾಲಿಕಾರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.
ದಿನಾಂಕ 25-09-2026 ರಂದು ಸಂಜೆ 4 ಗಂಟೆಗೆ ಬಾದಾಮಿ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಅಪರಾಧ ವಿಭಾಗದ ಪಿಎಸ್‌ಐ ಎನ್ ಎಲ್ ವಾಲಿಕಾರ ಹಾಗೂ ಸಿಬ್ಬಂದಿಯವರು ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಂಧ್ರಪ್ರದೇಶ ರಾಜ್ಯದ ಎಪಿ-28 ಡಿಎಲ್-5847 ಸಂಖ್ಯೆಯ ಕಾರನ್ನು ತಡೆದು ಪರಿಶೀಲನೆ ನಡೆಸಿದರು.
ವಾಹನದಲ್ಲಿದ್ದ ಒಬ್ಬ ಪುರುಷ ಮತ್ತು ಮಹಿಳೆಯನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಯಿತು ವಿಚಾರಣೆಯ ವೇಳೆ ವಿವಿಧ ಕಂಪನಿಗಳ 19 ಮೊಬೈಲ್ ಫೋನ್‌ಗಳನ್ನು ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಂದಾಜು ₹2.66 ಲಕ್ಷ ಮೌಲ್ಯದ 19 ಮೊಬೈಲ್ ಫೋನ್‌ಗಳು ಹಾಗೂ ₹3 ಲಕ್ಷ ಮೌಲ್ಯದ ಸುಜುಕಿ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹5.66 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 195/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 303(2) ಹಾಗೂ ಬಿಎನ್‌ಎಸ್‌ಎಸ್-2023ರ ಕಲಂ 38 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದೆ.
ಆರೋಪಿಗಳ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎನ್ ಎಲ್ ವಾಲಿಕಾರ ನೇತೃತ್ವದ ತಂಡದೊಂದಿಗೆ ಸಿಎಚ್‌ಸಿ ಎ ಎಸ್ ಚವ್ಹಾಣ, ಸಿಪಿಸಿ ಬಿ ಎ ವಾಲಿಕಾರ, ವಿ ಎನ್ ಲಮಾಣಿ, ಸಂತೋಷ ಬಾಡಗಿ, ವಾಹನ ಚಾಲಕ ಮಂಜುನಾಥ ಕುಂದರಗಿ ಹಾಗೂ ಮಹಾಂತೇಶ ಹರದೊಳ್ಳಿ, ಮಹಿಳಾ ಸಿಬ್ಬಂದಿ ಜುಬೇದಾ ರೋಣದ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಚಂದ್ರು ಜಟ್ಟೆಪ್ಪಗೊಳ, ಬಸು ಜಗಲಿ ಹಾಗೂ ಮುತ್ತು ಬಿಸನಾಳ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನಿನ ಮುಂದೆ ಹಾಜರುಪಡಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಮಾನ್ಯ ಮೇಲಾಧಿಕಾರಿಗಳು ಪ್ರಶಂಸಿಸಿದ್ದಾರೆ.
ವರದಿ : ಬಸವರಾಜ ಪೂಜಾರಿ


