ಬೆಳಗಾವಿ: ಕಡತಗಳ ವರ್ಗಾವಣೆಗಾಗಿ ಲಂಚ ಪಡೆಯುತ್ತಿದ್ದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯ ಎಸ್‌ಡಿಎ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದೂರುದಾರರಿಂದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಭ್ರಷ್ಟ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಉಪವಿಭಾಗಾಧಿಕಾರಿ ಕಚೇರಿಯ ಎಸ್‌ಡಿಎ ಸಿಬ್ಬಂದಿ ಪದ್ಮಾಕರ್ ಪಾಟೀಲ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಎಸಿ ಕೋರ್ಟ್‌ಗೆ ಒಟ್ಟು 37 ಪ್ರಕರಣಗಳನ್ನು (ಕೇಸ್) ವರ್ಗಾವಣೆ ಮಾಡಿಕೊಡುವ ಸಲುವಾಗಿ ಪದ್ಮಾಕರ್ ಪಾಟೀಲ್ ಅವರು ದೂರುದಾರರಾದ ಶುಭಂ ಅಪ್ಪಾರಾವ್ ಎಂಬುವವರಿಗೆ ಬರೋಬ್ಬರಿ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚ ನೀಡಲು ಇಷ್ಟವಿಲ್ಲದ ಶುಭಂ ಅಪ್ಪಾರಾವ್ ಅವರು ಈ ಕುರಿತು ಬೆಳಗಾವಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಆರೋಪಿಯನ್ನು ಬಲೆಗೆ ಕೆಡವಲು ತಂತ್ರ ರೂಪಿಸಿದ್ದರು.
ಅದರಂತೆ, ಮುಂಗಡವಾಗಿ 2 ಸಾವಿರ ರೂಪಾಯಿ ಲಂಚದ ಹಣವನ್ನು ಪದ್ಮಾಕರ್ ಪಾಟೀಲ್ ಸ್ವೀಕರಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಲೋಕಾಯುಕ್ತ ತಂಡ, ಹಣದ ಸಮೇತ ಆತನನ್ನು ವಶಕ್ಕೆ ಪಡೆದಿದೆ.


