ಚಂಡೀಗಢ: ಪಂಜಾಬ್‌ನ ತರನ್‌ತಾರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಭಾಗದಲ್ಲಿ ಅಕ್ರಮವಾಗಿ ಭಾರತದ ಭೂಪ್ರದೇಶ ಪ್ರವೇಶಿಸಲು ಹವಣಿಸುತ್ತಿದ್ದ ಇಬ್ಬರು ಶಂಕಿತ ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ರಾಜೋಕೆ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಈ ಎನ್‌ಕೌಂಟರ್ ನಡೆದಿದೆ.
ಎಚ್ಚರಿಕೆ ಲೆಕ್ಕಿಸದೆ ಮುನ್ನುಗ್ಗಿದಾಗ ಬಿಎಸ್‌ಎಫ್ ಫೈರಿಂಗ್
ಶುಕ್ರವಾರ ನಸುಕಿನ ವೇಳೆಯಲ್ಲಿ ರಾಜೋಕೆ ಗಡಿ ಪೋಸ್ಟ್ ವ್ಯಾಪ್ತಿಯಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಭಾರತದ ಗಡಿಯೊಳಗೆ ನುಸುಳಲು ಮುಂದಾಗಿದ್ದರು.
ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧರು ತಕ್ಷಣವೇ ಜಾಗೃತರಾಗಿ ಅವರನ್ನು ತಡೆದು, ವಾಪಸ್ ತೆರಳುವಂತೆ ಎಚ್ಚರಿಕೆ ನೀಡಿದರು. ಆದರೆ ಎಚ್ಚರಿಕೆಯನ್ನು ಕಡೆಗಣಿಸಿ ಆ ಶಂಕಿತರು ಭಾರತದ ಗಡಿಯತ್ತಲೇ ಮುನ್ನುಗ್ಗಲು ಯತ್ನಿಸಿದಾಗ, ಯೋಧರು ಅನಿವಾರ್ಯವಾಗಿ ಗುಂಡಿನ ದಾಳಿ ನಡೆಸಿದರು.


