ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಧೀಡೀರ್ ಹತ್ಯೆ ಮಾಡಿ, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಘಟನೆ ನಗರದ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಆರೋಪಿ ಪತಿಯನ್ನು ಪೊಲೀಸರು ಬಿಹಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ಧೀರಜ್ ಕುಮಾರ್ (24) ಬಂಧಿತ ಆರೋಪಿಯಾಗಿದ್ದು, ಜುಲೈ 27 ರಂದು ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ಈ ದೋರಜನಕ ಕೃತ್ಯ ಎಸಗಿದ್ದ.
ವಿಷಯ ಬೆಳಕಿಗೆ ಬಂದಿದ್ದು ಹೇಗೆ? ಜುಲೈ 29 ರಂದು ಮೃತ ರೀಯಾ ಕುಮಾರ್ (20) ಅವರ ಸ್ನೇಹಿತೆ ಹಲವು ಬಾರಿ ಫೋನ್ ಮಾಡಿದರೂ ಯಾವುದೇ ಉತ್ತರ ಬರಲಿಲ್ಲ. ಇದರಿಂದ ಅನುಮಾನಗೊಂಡ ಅವರು ಮನೆ ಬಳಿ ಹೋಗಿ ಪರಿಶೀಲಿಸಿದಾಗ ಕಿಟಕಿ ಬಳಿ ತೀವ್ರ ದುರ್ವಾಸನೆ ಬರುತ್ತಿರುವುದು ತಿಳಿದುಬಂದಿದೆ.
ತಕ್ಷಣವೇ ಮನೆ ಮಾಲೀಕ ಲಕ್ಷ್ಮಣ್ ಅವರಿಗೆ ಮಾಹಿತಿ ನೀಡಲಾಗಿದ್ದು, ಬಾಗಿಲು ತೆರೆದು ನೋಡಿದಾಗ ಬೆಡ್‌ಶೀಟ್‌ನಲ್ಲಿ ಸುತ್ತಲ್ಪಟ್ಟ ಸ್ಥಿತಿಯಲ್ಲಿ ಕೊಳೆತು ಹೋಗಿದ್ದ ರೀಯಾ ಅವರ ಶವ ಪತ್ತೆಯಾಗಿದೆ. ಬಳಿಕ ಸ್ಥಳೀಯರು ಕುಂಬಳಗೂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ: ಬಿಹಾರ ಮೂಲದ ಧೀರಜ್ ಮತ್ತು ರೀಯಾ ಪ್ರೀತಿಸುತ್ತಿದ್ದು, ಸುಮಾರು 10 ತಿಂಗಳ ಹಿಂದೆ ಪೋಷಕರಿಗೆ ತಿಳಿಸದೆ ಬೆಂಗಳೂರಿಗೆ ಬಂದು ಮದುವೆಯಾಗಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಗೇರುಪಾಳ್ಯದ ಲಕ್ಷ್ಮಣ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ದಂಪತಿಯಲ್ಲಿ ರೀಯಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಧೀರಜ್ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದನು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿಯ ಮಧ್ಯೆ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಪದೇ ಪದೇ ಜಗಳಗಳು ನಡೆಯುತ್ತಿದ್ದವು.
ಬುದ್ಧಿ ಹೇಳಿದ್ದರೂ ಕೇಳದ ಕೋಪ: ಪತಿ-ಪತ್ನಿಯ ನಡುವಿನ ಮನಸ್ತಾಪ ಹೆಚ್ಚಾದಾಗ ಸ್ನೇಹಿತರು ಹಾಗೂ ಹಿತೈಷಿಗಳು ಮಧ್ಯಪ್ರವೇಶಿಸಿ ದಂಪತಿಗೆ ಸಮಾಧಾನಪಡಿಸಿ ಬುದ್ಧಿವಾದ ಹೇಳಿದ್ದರು.
ಆದಾಗ್ಯೂ ಇಬ್ಬರ ನಡುವಿನ ಹೊಂದಾಣಿಕೆ ಕೊರತೆ ಮುಂದುವರಿದಿತ್ತು. ಜುಲೈ 27 ರಂದು ನಡೆದ ತೀವ್ರ ಜಗಳದ ವೇಳೆ ಆಕ್ರೋಶಗೊಂಡ ಧೀರಜ್, ಪತ್ನಿ ರೀಯಾಳ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ಮುಚ್ಚಿಹಾಕುವ ಉದ್ದೇಶದಿಂದ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಸ್ವಗ್ರಾಮ ಬಿಹಾರಕ್ಕೆ ಪರಾರಿಯಾಗಿದ್ದ.
ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು: ಕೊಲೆ ಪ್ರಕರಣ ದಾಖಲಿಸಿಕೊಂಡ ಕುಂಬಳಗೂಡು ಠಾಣೆಯ ವಿಶೇಷ ಪೊಲೀಸ್ ತಂಡವು ತನಿಖೆ ತೀವ್ರಗೊಳಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಬಿಹಾರದಲ್ಲಿರುವುದನ್ನು ಪತ್ತೆಹಚ್ಚಿದೆ.
ಕೂಡಲೇ ಬಿಹಾರಕ್ಕೆ ತೆರಳಿದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಧೀರಜ್ ಕುಮಾರ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ.
ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


