ಮೈಸೂರು: ಶಾಲಾ ಸಮವಸ್ತ್ರ ವಿಚಾರವಾಗಿ 2022ರ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಹೊಸ ಆದೇಶ ಹೊರಡಿಸಿದೆ. ಹೊಸ ಆದೇಶದಲ್ಲಿ ಹಿಜಾಬ್ ಗೆ ಅವಕಾಶ ನೀಡಿರುವುದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಶಾಲಾ ಸಮವಸ್ತ್ರದ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹಿಜಾಬ್, ಜನಿವಾರ, ಶಿವದಾರ, ರುದ್ರಾಕ್ಷಿ ಸೇರಿದಂತೆ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಲಾಗಿದೆ.
ಆದರೆ ಕೇಸರಿ ಶಾಲು, ಸಿಂಧೂರ, ಕುಂಕುಮ, ತಿಲಕದ ವಿಚಾರವಾಗಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಇದು ಹಿಂದೂ ಸಂಘಟನೆಗಳು, ವಿಪಕ್ಷ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿದೆ. ಕೇಸರಿ ಶಾಲು ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ರುದ್ರಾಕ್ಷಿ, ಜನಿವಾರ, ಶಿವದಾರ, ಉಡದಾರ, ಹಿಜಾಬ್ ಪೇಟ ಯಾವುದೇ ಧಾರ್ಮಿಕವಾದ ವಸ್ತುಗಳನ್ನು ಅವರ ಮನಸ್ಸಿಗೆ ಅನುಗುಣವಾಗಿ ಧರಿಸಬಹುದು. ಆದರೆ ಕೇಸರಿ ಶಾಲು ಧರಿಸಲು ಅವಕಾಶವಿಲ್ಲ. ಹೊಸ ರೂಪದ ಪೇಟಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

