ಧಾರವಾಡ: ಹಣಕಾಸಿನ ಮುಗ್ಗಟ್ಟು ಹಾಗೂ ಸಾಲದ ಸುಳಿಗೆ ಸಿಲುಕಿ ಕಂಗೆಟ್ಟಿದ್ದ ತಾಯಿಯೊಬ್ಬರು ತನ್ನ ಮೂವರು ಮುದ್ದು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ (Crime) ಶರಣಾಗಲು ಯತ್ನಿಸಿದ ಅತ್ಯಂತ ದಾರುಣ ಘಟನೆಯು ಧಾರವಾಡ (Dharwad) ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.
ಈ ಭೀಕರ ಕೃತ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೇವಲ ಎಂಟು ವರ್ಷದ ಕಂದಮ್ಮ ಪ್ರಾಣಬಿಟ್ಟಿದ್ದು, ತಾಯಿ ಹಾಗೂ ಉಳಿದ ಇಬ್ಬರು ಹೆಣ್ಣುಮಕ್ಕಳು ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.
ಅಸಹಾಯಕತೆಯಿಂದ ಬೇಸತ್ತು ಕಠಿಣ ನಿರ್ಧಾರ
ಪ್ರಾಥಮಿಕ ವರದಿಗಳ ಪ್ರಕಾರ, ಮೃತ ದುರ್ದೈವಿ ಬಾಲಕಿಯನ್ನು 8 ವರ್ಷ ವಯಸ್ಸಿನ ನಿವೇದಿತಾ ಅಲಿಯಾಸ್ ಗದಿಗೆವ್ವ ಎಂದು ಗುರುತಿಸಲಾಗಿದೆ. ತಾಯಿ ಸವಿತಾ (42) ಹಾಗೂ ಉಳಿದ ಇಬ್ಬರು ಮಕ್ಕಳಾದ ಭಾಗ್ಯಶ್ರೀ (6) ಮತ್ತು ಹರ್ಷಿತಾ (9) ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ತುರ್ತು ಚಿಕಿತ್ಸೆ ಮುಂದುವರಿದಿದೆ. ಸಾಲ ತೀರಿಸಲಾಗದ ಅಸಹಾಯಕತೆಯಿಂದ ಬೇಸತ್ತು ಈ ವಿಪರೀತ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.


