ಬೆಳಗಾವಿ: ನಗರದ ನಾಥಪೈ ವೃತ್ತದಲ್ಲಿ ಅತಿಕ್ರಮಣ ತೆರವುಗೊಳಿಸಲು ತೆರಳಿದ್ದ ಮಹಾನಗರ ಪಾಲಿಕೆ ಅಭಿಯಂತರರ ಮೇಲೆ 20ಕ್ಕೂ ಹೆಚ್ಚು ಜನರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಫುಟ್ಪಾತ್ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅಭಿಯಂತರರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಗುಂಪು ಹಲ್ಲೆಗೆ ಮುಂದಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದೆ.
ಈ ಅಕ್ರಮ ಕೃತ್ಯ ಖಂಡಿಸಿ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಪೂರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ಅಧಿಕಾರಿಗಳು ಶಾಪೂರು ಠಾಣೆಗೆ ಅಧಿಕೃತವಾಗಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಒತ್ತುವರಿ ತೆರವು ಕಾರ್ಯದ ವೇಳೆ ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಯತ್ನಿಸಿರುವುದು ಸ್ಥಳೀಯವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.


