ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೂಡಬಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ದಂಪತಿಗಳು ಸ್ಥಳದಲ್ಲೇ ಸಾವನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮೂಲದ ಶಿವಕುಮಾರ್ ಸಂಗಯ್ಯ (58) ಹಾಗೂ ಅವರ ಪತ್ನಿ ಸಂಗಮ್ಮ (50) ಮೃತ ದುರ್ದೈವಿಗಳಾಗಿದ್ದಾರೆ.
ಈ ಕುಟುಂಬವು ತಮ್ಮ ಇಬ್ಬರು ಪುತ್ರರು, ಸೊಸೆ ಹಾಗೂ ಮೊಮ್ಮಗನೊಂದಿಗೆ ಕಾರಿನಲ್ಲಿ ಮಹಾರಾಷ್ಟ್ರದ ತುಳಜಾಪುರದ ಅಂಬಾಭವಾನಿ ದರ್ಶನಕ್ಕೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮೂಡಬಿ ಕ್ರಾಸ್ ಬಳಿ ಬರುತ್ತಿದ್ದಂತೆ ಕಾರಿಗೆ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇತರ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತೆಲಂಗಾಣದ ಸಂಗಾರೆಡ್ಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕ ಶರಣು ಸಲಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


