ಬೆಂಗಳೂರು : ಉತ್ತರ ಕರ್ನಾಟಕದ ಜನಸಾಮಾನ್ಯರ ನಿತ್ಯದ ಆಹಾರವಾಗಿರುವ ಜೋಳದ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಜನಸಾಮಾನ್ಯರ ಹಾಗೂ ಹೋಟೆಲ್ ಉದ್ಯಮಿಗಳ ಕಂಗಾಲಿಗೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಜೋಳದ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ, ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೇರಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಕ್ವಿಂಟಾಲ್‌ಗೆ ₹5,500ರಷ್ಟಿದ್ದ ಪ್ರಸಿದ್ಧ ಮಾಲ್ದಂಡಿ ತಳಿಯ ಜೋಳದ ಬೆಲೆ, ಸೆಪ್ಟೆಂಬರ್‌ನಲ್ಲಿ ₹5,650ಕ್ಕೆ ಏರಿಕೆಯಾಗಿ, ಅಕ್ಟೋಬರ್ ವೇಳೆಗೆ ಬರೋಬ್ಬರಿ ₹9,200ಕ್ಕೆ ತಲುಪಿದೆ.
ಇನ್ನು 'ಗುಂಡು ತೆನೆ' ತಳಿಯ ಜೋಳದ ದರವೂ ಸಹ ₹9,000ದ ಗಡಿ ದಾಟಿದ್ದು, ಕಳೆದ ಹತ್ತು ವರ್ಷಗಳಲ್ಲೇ ಇದು ದಾಖಲೆಯ ಗರಿಷ್ಠ ಬೆಲೆಯಾಗಿದೆ.
ಉತ್ಪಾದನಾ ಕುಸಿತಕ್ಕೆ ಪ್ರಮುಖ ಕಾರಣ ಈ ಬಾರಿ ಎದುರಾಗಿರುವ ಬರ ಪರಿಸ್ಥಿತಿಯಾಗಿದೆ. ಕಲಬುರಗಿ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜೋಳ ಪ್ರಮುಖ ಬೆಳೆಯಾಗಿದ್ದರೂ, ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷಿತ ಪ್ರಮಾಣದ ಇಳುಬರಿ ಬಂದಿಲ್ಲ. ಮಾರುಕಟ್ಟೆಗೆ ಒಳಹರಿವು ಕಡಿಮೆ ಇರುವುದರಿಂದ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ಮುಂದುವರಿದಿದೆ.


