ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಹಾಗೂ ಹೆಚ್‌ಎಂಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಡಿ ದಾಳಿಯ ಬಗ್ಗೆ (ED Raid) ಶನಿವಾರ ಬೆಳಿಗ್ಗೆ ದಿಢೀರನೆ ಕಂಗೊಳಿಸಿರುವ ಕೆಲವು ಪೋಸ್ಟರ್‌ಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.
"ED - BJP ಭಾಯಿ ಭಾಯಿ" ಎಂಬ ಸಾಲುಗಳುಳ್ಳ ಈ ಪೋಸ್ಟರ್‌ಗಳು ಸಾರ್ವಜನಿಕರ ಹಾಗೂ ಹಾದುಹೋಗುವ ವಾಹನ ಸವಾರರ ಗಮನ ಸೆಳೆಯುತ್ತಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ವಿಶೇಷವೆಂದರೆ, ಈ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವ ಜಾಲಹಳ್ಳಿ ಭಾಗದಲ್ಲಿಯೇ ಜಾರಿ ನಿರ್ದೇಶನಾಲಯದ (ED) ಪ್ರಾದೇಶಿಕ ಕಚೇರಿ ಇದೆ.
ಅಲ್ಲದೆ, ಇದೇ ವ್ಯಾಪ್ತಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನಿವಾಸವೂ ಇರುವುದು ಈ ವಿದ್ಯಮಾನಕ್ಕೆ ಮತ್ತಷ್ಟು ಪ್ರಮುಖ ರಾಜಕೀಯ ಆಯಾಮವನ್ನು ನೀಡಿದೆ.
ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಸರಣಿ ಪ್ರಶ್ನೆಗಳು
ರಸ್ತೆಬದಿಯ ಗೋಡೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿರುವ ಈ ಪೋಸ್ಟರ್‌ಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಲಾಗಿದೆ.
ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ವಿಪಕ್ಷ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದ (ED) ತನಿಖೆಗಳನ್ನು ಕೇವಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಕಠಿಣ ಪ್ರಶ್ನೆಯನ್ನು ಪೋಸ್ಟರ್‌ಗಳಲ್ಲಿ ಎತ್ತಲಾಗಿದೆ.


