ಬೆಳಗಾವಿ: ನಗರದಲ್ಲಿ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯು ಸಂಪೂರ್ಣ ಶಾಂತಿಯುತ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನೆರವೇರಲು ಬೆಳಗಾವಿ ನಗರ ಪೊಲೀಸ್ ಇಲಾಖೆಯು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬೃಹತ್ ಪಥಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
ನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಪಡೆ (KSRP) ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ (CAR) ತುಕಡಿಗಳು ಜಂಟಿಯಾಗಿ ಈ ಪಥಸಂಚಲನದಲ್ಲಿ ಭಾಗವಹಿಸಿದ್ದವು. ನಗರದ ಆನಗೋಳ, ಮಾರ್ಕೆಟ್ ಹಾಗೂ ಖಾಡೆಬಜಾರ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸುವ ಮೂಲಕ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಯಿತು.

ವಿಶೇಷ ಬಂದೋಬಸ್ತ್ ಹಾಗೂ ಮುನ್ನೆಚ್ಚರಿಕೆ:
ವ್ಯಾಪಕ ಭದ್ರತೆ: ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸಿಸಿಟಿವಿ ಮತ್ತು ಡ್ರೋನ್ ಕಣ್ಗಾವಲು: ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಖ್ಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಡ್ರೋನ್ ಮೂಲಕ ತೀವ್ರ ನಿಗಾ ವಹಿಸಲಾಗುತ್ತಿದೆ.

ಶಾಂತಿ ಸಭೆ: ನಗರದ ವಿವಿಧ ಸಮಾಜದ ಗಣ್ಯರು ಹಾಗೂ ಹಿರಿಯರೊಂದಿಗೆ ಈಗಾಗಲೇ ಶಾಂತಿ ಸಭೆಗಳನ್ನು ನಡೆಸಿ, ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಸೂಚಿಸಲಾಗಿದೆ.
ಯಾರಾದರೂ ವದಂತಿಗಳನ್ನು ಹರಡಿದರೆ ಅಥವಾ ಶಾಂತಿ ಭಂಗ ತರಲು ಯತ್ನಿಸಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ಹಾಗೂ ಹಬ್ಬ ಆಚರಿಸುವ ಸಂಘಟಕರು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಿ, ಶಾಂತಿಯುತವಾಗಿ ಈದ್ ಮಿಲಾದ್ ಆಚರಿಸಬೇಕಾಗಿ ವಿನಂತಿಸಲಾಗಿದೆ ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ


