ಬೆಂಗಳೂರು : ಕನ್ನಡ ಸಾಹಿತ್ಯ, ಭಾಷಾವಿಜ್ಞಾನ ಹಾಗೂ ವಿಮರ್ಶಾ ಲೋಕಕ್ಕೆ ಭಾರಿ ಆಘಾತ ಎದುರಾಗಿದೆ. ಕನ್ನಡದ ಹಿರಿಯ ಭಾಷಾವಿಜ್ಞಾನಿ, ಪ್ರಖ್ಯಾತ ಸಾಹಿತ್ಯ ವಿಮರ್ಶಕ ಹಾಗೂ ಸಾಹಿತ್ಯ ಲೋಕದಲ್ಲಿ 'ಕೆವಿಎನ್' ಎಂದೇ ಚಿರಪರಿಚಿತರಾಗಿದ್ದ ಪ್ರೊಫೆಸರ್ ಕೆ.ವಿ. ನಾರಾಯಣ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದ ಪ್ರೊ. ಕಂಪಲಾಪುರ ವೀರಣ್ಣ ನಾರಾಯಣ್ ಅವರ ಆರೋಗ್ಯದಲ್ಲಿ ಗುರುವಾರ ತಡರಾತ್ರಿ ದಿಢೀರ್ ಏರುಪೇರಾಗಿತ್ತು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ 1948 ರಲ್ಲಿ ಜನಿಸಿದ ನಾರಾಯಣ ಅವರು, ಆರಂಭಿಕ ಶಿಕ್ಷಣದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ (MA) ಪದವಿ ಪಡೆದರು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದ ಅವರು ಕನ್ನಡ ಭಾಷೆಯ ಬೇರು ಮಟ್ಟದ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಬೆಂಗಳೂರಿನ ಪ್ರಸಿದ್ಧ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದರು.


