ಬೆಂಗಳೂರು: ಕನ್ನಡದ ಖ್ಯಾತ ಡ್ರಮ್ಮರ್ ದೇವ(64) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ಮರ್ ದೇವ ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ನಿವಾಸದಲ್ಲಿ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.
ಆರ್.ಆರ್. ನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡ್ರಮ್ಮರ್ ದೇವ ಆರ್ಸಿಬಿ ಪಂದ್ಯದ ವೇಳೆ ಲೈವ್ ಬೀಟ್ ಪ್ರದರ್ಶನ ನೀಡುತ್ತಿದ್ದರು.
'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದರು
ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಡ್ರಮ್ ವಾದನದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ಡ್ರಮ್ಮರ್ ದೇವ ಅವರು ನಿಧನರಾಗಿದ್ದಾರೆ. 'ಕನ್ನಡದ ಶಿವಮಣಿ' ಎಂದೇ ಗುರುತಿಸಿಕೊಂಡಿದ್ದರು.
ದೇವ ಅವರು ಹಲವು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಅದ್ಭುತ ಡ್ರಮ್ ವಾದನದ ಮೂಲಕ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು.
ಕನ್ನಡ ಚಿತ್ರರಂಗದ ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅವರು, ದೇಶ-ವಿದೇಶಗಳಲ್ಲಿ ಸಾವಿರಾರು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.


