ಚಿತ್ರದುರ್ಗ: ಪವನ್ ಒಡೆಯರ್ ನಿರ್ದೇಶನದಲ್ಲಿ, ಸಾಯಿ ಕುಮಾರ್ ಹಾಗೂ ಜಯರಾಮ್ ಸುಬ್ರಮಣ್ಯಂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಬೇಲ್' ಸಿನಿಮಾ ಅಕ್ಟೋಬರ್ 2ರಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರದ ಪ್ರತಿ ಹಂತದ ಪ್ರಚಾರದಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿರುವ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಡಾ.ಶಿವರಾಜ್‌ಕುಮಾರ್, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕಾರಿನಲ್ಲಿ ಸುತ್ತಾಡಿ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡಿದ್ದರು.
ಇದೀಗ 'ಬೇಲ್' ಚಿತ್ರದ ಪ್ರಚಾರಾರ್ಥವಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಅನಿರೀಕ್ಷಿತ ಪಟಾಕಿ ಅವಘಡ ಸಂಭವಿಸಿದೆ.
ಚಿತ್ರದುರ್ಗದ ಖಾಸಗಿ ಶೋರೂಮ್ ಒಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ನಟ ಶಿವರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಈ ವೇಳೆ ಶೋರೂಮ್‌ಗೆ ಶಿವಣ್ಣ ಪ್ರವೇಶಿಸುತ್ತಿದ್ದಂತೆ ಬಾಗಿಲ ಬಳಿ ಹಚ್ಚಲಾಗಿದ್ದ 'ಫ್ಲವರ್ ಪಾಟ್' (ಹೂಬಾಣ) ಪಟಾಕಿ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ದೊಡ್ಡ ಪ್ರಮಾಣದ ಶಬ್ದ ಉಂಟಾಗಿ, ಶೋರೂಮ್ ಒಳಗಡೆ ಕ್ಷಣಮಾತ್ರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು.


