ನವದೆಹಲಿ: ದೇಶದ ಮೂಲಸೌಕರ್ಯ ಅಭಿವೃದ್ಧಿ, ದೇಶೀಯ ಉತ್ಪಾದನಾ ವಲಯದ ಉತ್ತೇಜನ ಹಾಗೂ ಅಂಚೆ ಸೇವೆಗಳ ಆಧುನೀಕರಣಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ ₹19, 934 ಕೋಟಿ ಮೊತ್ತದ ಐದು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ನಿರ್ಧಾರಗಳಲ್ಲಿ ಅಸ್ಸಾಂನಲ್ಲಿ ನೂತನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ, ತಮಿಳುನಾಡಿನ ಕಾಮರಾಜರ್ ಬಂದರಿನಲ್ಲಿ ಎರಡನೇ ಕಂಟೈನರ್ ಟರ್ಮಿನಲ್ ಸ್ಥಾಪನೆ, ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ದೇಶೀಯ ಉತ್ಪಾದನಾ ಯೋಜನೆ ಹಾಗೂ ಅಂಚೆ ಇಲಾಖೆಯ ಎರಡು ಪ್ರಮುಖ ಯೋಜನೆಗಳ ಮುಂದುವರಿಕೆ ಸೇರಿವೆ
ಸಚಿವ ಸಂಪುಟದ 5 ಪ್ರಮುಖ ನಿರ್ಧಾರಗಳ ವಿವರ ಇಲ್ಲಿದೆ:
- ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನೆಗೆ ₹11,000 ಕೋಟಿ ಯೋಜನೆ: ದೇಶದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (Construction and Infrastructure Equipment - CIE) ದೇಶೀಯ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸಂಪುಟ ₹11,000 ಕೋಟಿ ಮೊತ್ತದ ಯೋಜನೆಗೆ ಹಸಿರು ನಿಶಾನೆ ತೋರಿದೆ.
- ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಅಭಿಯಾನದಡಿ ವಿದೇಶಿ ಯಂತ್ರೋಪಕರಣಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು, ದೇಶೀಯ ಪೂರೈಕೆ ಸರಪಳಿಯನ್ನು ವಿಸ್ತರಿಸುವುದು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.


