ತುರುವೇಕೆರೆ: ಹೆಗ್ಗೆರೆಯ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್, ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮೇ 10 ರಂದು ತಾಲೂಕಿನ ಹೆಗ್ಗೆರೆಯಲ್ಲಿ ದಿವಂಗತ ಶ್ರೀ ಜವರಪ್ಪಸ್ವಾಮಿರವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್. ಎನ್. ಪರಮೇಶ್ವರಯ್ಯ ತಿಳಿಸಿದರು.
ಲಯನ್ಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣದ ಪರಿಕಲ್ಪನೆಯಲ್ಲಿ ಲಯನ್ಸ್ ಕ್ಲಬ್ ಕಳೆದ ಮೂರು ದಶಕಗಳಿಂದ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಮಸ್ಯೆ ಇಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರಾಯೋಜಕರ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದರು. ಹೆಗ್ಗೆರೆಯಲ್ಲಿ ಮೇ 10 ರಂದು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ರಕ್ತದೊತ್ತಡ, ಮಧುಮೇಹ ಹೆಚ್.ಬಿ.ಎ.1ಸಿ., ಬೋನ್ ಮಿನರಲ್ ಡೆನ್ಸಿಟಿ, ಶ್ವಾಸಕೋಶ ತಪಾಸಣೆ, ಥೈರಾಯಿಡ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರವು ದಿವಂಗತ ಜವರಪ್ಪಸ್ವಾಮಿ ಸ್ಮರಣಾರ್ಥ ನಡೆಯುತ್ತಿದ್ದು, ಶ್ರೀ ವೆಂಕಟೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್. ಎನ್. ಗಂಗಾಧರಯ್ಯ ಶಿಬಿರ ಉದ್ಘಾಟಿಸಲಿದ್ದಾರೆ. ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಟ್ರಸ್ಟ್ ಉಪಾಧ್ಯಕ್ಷ, ವೈದ್ಯ ಡಾ.ಹರ್ಷಿತ್ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ವಲಯಾಧ್ಯಕ್ಷ ಹೆಚ್. ಆರ್. ರಂಗನಾಥ್, ಕಾರ್ಯದರ್ಶಿ ಡಾ. ಎ.ನಾಗರಾಜ್, ಮಾರ್ಕೆಟಿಂಗ್ ಆಫೀಸರ್ ಗಳಾದ ಸುನಿಲ್ ಕುಮಾರ್, ಶಮ್ಸ್ ಹಾಗೂ ಕೀಲು ಮತ್ತು ಮೂಳೆ ತಜ್ಞ ಡಾ.ಸುನಿಲ್ ಕುಮಾರ್ ಆಗಮಿಸಲಿದ್ದಾರೆ ಎಂದರು. ಗೋಷ್ಟಿಯಲ್ಲಿ ಲಯನ್ಸ್ ಕಾರ್ಯದರ್ಶಿ ಡಾ.ನಾಗರಾಜ್, ಪದಾಧಿಕಾರಿಗಳಾದ ಡಾ. ಚೌದ್ರಿ ನಾಗೇಶ್, ಡಾ.ಹರ್ಷಿತ್, ಸುನಿಲ್ ಕುಮಾರ್, ಗಂಗಾಧರ ದೇವರಮನೆ, ರಂಗನಾಥ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್

