ಬೆಂಗಳೂರು : ಕರ್ನಾಟಕದಲ್ಲಿ(Karnataka) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯು ಇಂದಿನಿಂದ (ಜೂನ್ 20) ಅಧಿಕೃತವಾಗಿ ಆರಂಭವಾಗಿದೆ.
ಈ ಅಭಿಯಾನವು ಅಕ್ಟೋಬರ್ 7, 2026 ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಸುಮಾರು 23 ವರ್ಷಗಳ ಬಳಿಕ ರಾಜ್ಯದಲ್ಲಿ ಈ ರೀತಿಯ ಬೃಹತ್ ಮಟ್ಟದ ತೀವ್ರ ತಪಾಸಣೆ ನಡೆಯುತ್ತಿರುವುದು ವಿಶೇಷವಾಗಿದೆ.
ಇಂದಿನಿಂದ ಆರಂಭವಾಗಿರುವ ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಮುಂದಿನ ಕೆಲವು ತಿಂಗಳುಗಳ ಕಾಲ ನಿರಂತರವಾಗಿ ನಡೆಯಲಿದೆ.
ಮನೆ ಮನೆ ಸಮೀಕ್ಷೆ ಹಾಗೂ ತಪಾಸಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ, ಅಕ್ಟೋಬರ್ 7, 2026 ರಂದು ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುತ್ತದೆ.
23 ವರ್ಷಗಳ ಬಳಿಕ ಇಂತಹದೊಂದು ವಿಶೇಷ ಪ್ರಯತ್ನ!
ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಸುಮಾರು 23 ವರ್ಷಗಳ ಸುದೀರ್ಘ ಅವಧಿಯ ನಂತರ ಕರ್ನಾಟಕದಲ್ಲಿ ಈ ಮಟ್ಟದ ಬೃಹತ್ ಹಾಗೂ ತೀವ್ರ ತರಹದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದು ವಿಶೇಷವಾಗಿದೆ. ಈ ಅಭಿಯಾನದ ಮೂಲಕ ಅರ್ಹ ಮತದಾರರ ಸೇರ್ಪಡೆ ಹಾಗೂ ತಪ್ಪು ವಿವರಗಳ ತಿದ್ದುಪಡಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ನಕಲಿ ಅಥವಾ ಬೋಗಸ್ ಮತಗಳನ್ನು ತಡೆಯಲು ಪ್ರತಿ ಮತದಾರರನ್ನು ಅವರ ತಂದೆ, ತಾಯಿ ಅಥವಾ ಸಂಗಾತಿಯ ಹೆಸರಿನೊಂದಿಗೆ ಡಿಜಿಟಲ್ ಆಗಿ ಲಿಂಕ್ ಮಾಡಲಾಗುತ್ತಿದೆ. ಕುಟುಂಬದ ಲಿಂಕ್ ಸಿಗದಿದ್ದರೆ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ.
ಮನೆ ಮನೆ ತಪಾಸಣೆ: ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ಮಾಹಿತಿ ಸರಿಯಾಗಿ ಸಿಗದಿದ್ದರೆ, ನಿಮ್ಮನ್ನು 'ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ' (Shifted) ಅಥವಾ 'ಮೃತಪಟ್ಟಿದ್ದಾರೆ' ಎಂದು ಪರಿಗಣಿಸಿ ಪಟ್ಟಿಯಿಂದ ತೆಗೆದುಹಾಕಬಹುದು.
ದಾಖಲೆಗಳ ಪರಿಶೀಲನೆ: ವಯಸ್ಸಿನ ಆಧಾರದ ಮೇಲೆ ಹುಟ್ಟಿದ ದಿನಾಂಕ ಮತ್ತು ಸ್ಥಳದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಸೇರಿದಂತೆ 12 ಪ್ರಮುಖ ದಾಖಲೆಗಳಲ್ಲಿ ಒಂದನ್ನು ಒದಗಿಸಬೇಕಾಗುತ್ತದೆ


