ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ರಾಜ್ಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೂಚನೆಯಂತೆ ರಾಜ್ಯಾದ್ಯಂತ ಹಾಲು ಮತ್ತು ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ.
ಹಾಲಿನ ಗುಣಮಟ್ಟದ ಮೇಲೆ ಅಧಿಕಾರಿಗಳ ನಿಗಾ
ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ, ಸಂಯೋಜನೆ, ಲೇಬಲಿಂಗ್ ಸೇರಿದಂತೆ ಆಹಾರ ಸುರಕ್ಷತಾ ಮಾನದಂಡಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಾಲಿನ ಪೌಡರ್, ಪನ್ನೀರ್ ಸೇರಿದಂತೆ ಹಲವು ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಸಂಗ್ರಹಿಸಿರುವ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


