ಬಳ್ಳಾರಿ: ರಾಜ್ಯದಲ್ಲಿ ಮನಕಲಕುವ ಘೋರ ಘಟನೆಯೊಂದು ಸಂಭವಿಸಿದೆ. ಕೌಟುಂಬಿಕ ಸಮಸ್ಯೆಯಿಂದ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂರು ತಿಂಗಳ ಹಸುಗೂಸಿಗೆ ವಿಷ ಉಣಿಸಿ, ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಗಡಿಭಾಗವಾದ ಆಂಧ್ರಪ್ರದೇಶದ ಗೂಳ್ಯಂ ಬಳಿ ನಡೆದಿದೆ.ಒಂದೇ ಕುಟುಂಬದ ಮೂವರು ಹೀಗೆ ಧಾರುಣವಾಗಿ ಸಾವನ್ನಪ್ಪಿರುವುದು ಸ್ಥಳೀಯವಾಗಿ ತೀವ್ರ ಶೋಕವನ್ನು ಉಂಟುಮಾಡಿದೆ.
ಮೃತರ ಗುರುತು ಪತ್ತೆ: ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ನಿವಾಸಿಯಾದ ಮಹೇಶ್ (37) ಎಂಬಾತನೇ ತನ್ನ ಮೂರನೇ ಪತ್ನಿ ಮತ್ತು ಮೂರು ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಮಹೇಶ್ ತನಗಿದ್ದ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಇಡೀ ಕುಟುಂಬ ಇಹಲೋಕ ತ್ಯಜಿಸುವಂತಾಗಿದೆ.
ಘಟನೆಯ ಹಿನ್ನೆಲೆ: ಮೃತ ಮಹೇಶ್‌ನ ವೈವಾಹಿಕ ಜೀವನವು ಮೊದಲಿನಿಂದಲೂ ಸಾಕಷ್ಟು ಏರುಪೇರುಗಳಿಂದ ಕೂಡಿತ್ತು ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ಈತ ಸುಮಾರು ಆರು ವರ್ಷಗಳ ಹಿಂದೆಯೇ ತನ್ನ ಮೊದಲ ಹಾಗೂ ಎರಡನೇ ಪತ್ನಿಯರಿಂದ ಕಾನೂನುಬದ್ಧವಾಗಿ ದೂರಾಗಿದ್ದ ಎನ್ನಲಾಗಿದೆ. ಆ ಬಳಿಕ ಆತ ಮೂರನೇ ಮದುವೆಯಾಗಿದ್ದು, ಇತ್ತೀಚೆಗಷ್ಟೇ ಈ ದಂಪತಿಗೆ ಸುಂದರವಾದ ಮಗು ಜನಿಸಿತ್ತು.


