ಮಾನ್ವಿ :ದೀರ್ಘಕಾಲದ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದ್ದು ಬೆಂಗಳೂರು ಮತ್ತು ಮುಂಬೈ ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಈ ರೈಲಿಗೆ ರಾಯಚೂರು ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಿರುವುದು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಭಾರತದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರು ಜಾನೇಕಲ್ ಹರ್ಷ ವ್ಯಕ್ತಪಡಿಸಿದರು.
ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ರೈಲಿಗೆ ಮುಂದಿನ ವಾರಾಂತ್ಯ ಅಂದರೆ ಅಕ್ಟೋಬರ್ 10 ಅಥವಾ 11ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡುವ ನಿರೀಕ್ಷೆಯಿದೆ.
ವಾರದಲ್ಲಿ ಆರು ದಿನ ಸಂಚರಿಸಲಿರುವ 27651/27652 ಸಂಖ್ಯೆಯ ವಂದೇ ಭಾರತ್ ಸ್ಲೀಪರ್ ರೈಲು ಅನಂತಪುರ ಗುಂತಕಲ್ ರಾಯಚೂರು ಕಲಬುರಗಿ ಸೊಲ್ಲಾಪುರ ಪುಣೆ ಹಾಗೂ ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.ಬೆಂಗಳೂರುದಿಂದ ರಾತ್ರಿ 7.50ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 11.55ಕ್ಕೆ ಮುಂಬೈ ತಲುಪಲಿದೆ. ಅದೇ ರೀತಿ ಮುಂಬೈನಿಂದ ರಾತ್ರಿ 8.10ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 11.55ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲಿನ ಸಂಚಾರ ಆರಂಭದಿಂದ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ವೇಗವಾದ ಆರಾಮದಾಯಕ ಮತ್ತು ಆಧುನಿಕ ರೈಲು ಸೇವೆ ದೊರೆಯಲಿದ್ದು ಉದ್ಯೋಗ ವ್ಯಾಪಾರ ಹಾಗೂ ಶಿಕ್ಷಣಕ್ಕಾಗಿ ಸಂಚರಿಸುವ ಸಾವಿರಾರು ಜನರಿಗೆ ಇದು ಮಹತ್ತರ ಅನುಕೂಲವಾಗಲಿದೆ ಎಂದು ಚಂದ್ರು ಜಾನೇಕಲ್ ತಿಳಿಸಿದ್ದಾರೆ.
ರೈಲಿನ ನಿಖರ ವೇಳಾಪಟ್ಟಿ ಹಾಗೂ ಟಿಕೆಟ್ ದರವನ್ನು ಭಾರತೀಯ ರೈಲ್ವೆ ಮಂಡಳಿ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
ವರದಿ : ಆಂಜನೇಯ ನಸಲಾಪುರ


