ನ್ಯೂಯಾರ್ಕ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನಲ್ಲಿ ನಡೆದ 'ಒಂದು ಜಗತ್ತು: ಒಂದು ಮಾನವೀಯತೆ' (One World: One Humanity) ಧರ್ಮಗುರುಗಳ ಸಮ್ಮೇಳನದಲ್ಲಿ ಭಾಗವಹಿಸಿ, ಧರ್ಮಗಳ ನಡುವಿನ ಐಕ್ಯತೆ ಮತ್ತು ಸೌಹಾರ್ದತೆಗೆ ಕರೆ ನೀಡಿದ್ದಾರೆ.
ವಿವಿಧ ಧರ್ಮಗಳ ಮುಖಂಡರ ಉಪಸ್ಥಿತಿಯಲ್ಲಿ ಮಾತನಾಡಿದ ಅವರು, ಧರ್ಮಗಳು ಭಿನ್ನವಾಗಿದ್ದರೂ ಮಾನವೀಯತೆ ಒಂದೇ ಎಂದರು.
ಧರ್ಮ ಮತ್ತು ಸತ್ಯದ ಮಾರ್ಗ
ಇಂದಿನ ದಿನಗಳಲ್ಲಿ ಧರ್ಮಗಳನ್ನು ಕೇವಲ ಆಚರಣೆಗಳ ಮೂಲಕ ನೋಡಲಾಗುತ್ತಿದೆ ಎಂದು ಹೇಳಿದ ಭಾಗವತ್, "ದೈವಿಕತೆಯ ಹಾದಿಯಲ್ಲಿ ಸಾಗಲು ಆಚರಣೆಗಳ ಶಿಸ್ತು ಅಗತ್ಯವಿರಬಹುದು.
ಆದರೆ ಧರ್ಮದ ನಿಜವಾದ ಉದ್ದೇಶವೇನು? ಅದು ನಮ್ಮನ್ನು ಸತ್ಯದ ಕಡೆಗೆ ಕರೆದೊಯ್ಯುತ್ತದೆ. ನಮ್ಮ ಪರಂಪರೆ ಧರ್ಮಗಳು ಬೇರೆಯಾದರೂ ಮಾನವೀಯತೆ ಒಂದೇ ಎಂದು ಸಾರುತ್ತದೆ. ಸತ್ಯ ಒಂದೇ, ಮಾನವೀಯತೆ ಆ ಸತ್ಯದ ಉತ್ಪನ್ನ," ಎಂದು ಅಭಿಪ್ರಾಯಪಟ್ಟರು.
ವಿದೇಶಿ ಆಕ್ರಮಣಗಳ ನಡುವೆಯೂ ಭಾರತದ ಪ್ರಾಚೀನ ಪರಂಪರೆ ಉಳಿದುಕೊಂಡು ಬಂದಿದ್ದು, ಅದು ಇಡೀ ಜಗತ್ತು ಮತ್ತು ಮಾನವೀಯತೆಯ ಐಕ್ಯತೆಯನ್ನು ಕಲಿಸಿದೆ ಎಂದು ಅವರು ಒತ್ತಿ ಹೇಳಿದರು.
ಹಿಂದೂ ಧರ್ಮದ ಸಾರ ಮತ್ತು ಮುಸ್ಲಿಮರ ಕುರಿತು ಸಂದೇಶ
2018ರಲ್ಲಿ ಮುಸ್ಲಿಂ ಮುಖಂಡರು 'ಹಿಂದೂ ರಾಷ್ಟ್ರ'ದ ಪರಿಕಲ್ಪನೆ ಕುರಿತು ಕೇಳಿದ್ದ ಪ್ರಶ್ನೆಯನ್ನು ಸ್ಮರಿಸಿದ ಭಾಗವತ್, "ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾರಾದರೂ ಹಿಂದೂ ಯೋಚಿಸಿದರೆ, ಆತ ನಿಜವಾದ ಹಿಂದೂ ಧರ್ಮದ ಸಾರಕ್ಕೆ ಬದ್ಧನಾಗಿಲ್ಲ ಎಂದೇ ಅರ್ಥ," ಎಂದು ಸ್ಪಷ್ಟಪಡಿಸಿದರು.
ಹಿಂದೂ ಜೀವನ ಪದ್ಧತಿಯಲ್ಲಿ ಅನೇಕ ಮಾರ್ಗಗಳಿದ್ದರೂ ಅಂತಿಮ ಸತ್ಯ ಒಂದೇ. ಮನುಷ್ಯರ ನಡುವೆ ಯಾವುದೇ ಮೂಲಭೂತ ಭೇದಭಾವವಿಲ್ಲ ಮತ್ತು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ಅವರು ನುಡಿದರು.
ಅಲ್ಪಸಂಖ್ಯಾತರೊಂದಿಗೆ ಸಂವಾದ ಮತ್ತು ಸೇವೆ
ಭಾರತದಲ್ಲಿ ನೆಲೆಸಿರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳೊಂದಿಗೆ ಆರ್‌ಎಸ್‌ಎಸ್ ಸಂವಾದವನ್ನು ಆರಂಭಿಸಿದೆ ಎಂದು ತಿಳಿಸಿದ ಅವರು, "ಸಂವಾದ ಮತ್ತು ಸೇವೆ ಎರಡೂ ಒಟ್ಟೊಟ್ಟಿಗೆ ಸಾಗಬೇಕು.
ನಾವು ಮಾಡುವ ಸೇವೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಆದರೆ ಪ್ರಚಾರದ ವಿಚಾರದಲ್ಲಿ ನಾವು ಬಹಳ ಹಿಂದಿದ್ದೇವೆ. ನಮ್ಮ ಬಗ್ಗೆ ತಪ್ಪು ನಿರೂಪಣೆಗಳಿಂದ ಕಲ್ಪನೆಗಳನ್ನು ಸೃಷ್ಟಿಸಲಾಗಿದೆ. ಆದರೆ ಜನರು ನಮ್ಮ ಕೆಲಸವನ್ನು ಹತ್ತಿರದಿಂದ ನೋಡಿದಾಗ ಆ ತಪ್ಪು ಕಲ್ಪನೆಗಳು ದೂರವಾಗುತ್ತವೆ," ಎಂದರು.


