ನೇಪಾಳ : ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಭೋಟೆಕೋಶಿ-ತ್ರಿಶೂಲಿ ಪ್ರಕೃತಿ ವಿಕೋಪದಿಂದಾಗಿ ಜಲಪ್ರಳಯ ಹಾಗೂ ಹಿಮಪಾತ ಸಂಭವಿಸಿದ್ದು, ಉಭಯ ಪ್ರದೇಶಗಳಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಈ ಭೀಕರ ದುರಂತದಲ್ಲಿ ಈವರೆಗೆ ಬರೋಬ್ಬರಿ 626 ಮಂದಿ ಮೃತಪಟ್ಟಿದ್ದು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನೇಪಾಳವೊಂದರಲ್ಲೇ ಮೃತರ ಸಂಖ್ಯೆ 579ಕ್ಕೆ ಏರಿಕೆಯಾಗಿದ್ದು, 1,924 ಜನರು ಕಣ್ಮರೆಯಾಗಿದ್ದಾರೆ. ಇತ್ತ ಟಿಬೆಟ್‌ನಲ್ಲಿ 5 ಜನರು ಮೃತಪಟ್ಟು, 558 ಮಂದಿ ನಾಪತ್ತೆಯಾಗಿದ್ದಾರೆ.
ಗ್ರಾಮೀಣ ಪ್ರದೇಶಗಳು ಹಾಗೂ ಜಲವಿದ್ಯುತ್ ಯೋಜನೆಗಳ ಕೇಂದ್ರಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಸ್ಥಳೀಯ ಜಲವಿದ್ಯುತ್ ಯೋಜನೆಯೊಂದರ 400ಕ್ಕೂ ಹೆಚ್ಚು ಸಿಬ್ಬಂದಿ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಆಹಾರ ಮತ್ತು ನೀರಿಲ್ಲದೆ ಪರದಾಡುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಪ್ರವಾಹ ಮತ್ತು ಹಿಮಪಾತದ ಭೀತಿ ಮುಂದುವರಿದಿರುವುದು ರಕ್ಷಣಾ ಪಡೆಯ ಆತಂಕವನ್ನು ಹೆಚ್ಚಿಸಿದೆ.
ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿಹೋಗಿರುವುದರಿಂದ ಪರಿಹಾರ ಸಾಮಗ್ರಿ ತಲುಪಿಸುವುದು ಸವಾಲಾಗಿ ಪರಿಣಮಿಸಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.


