ಬೆಂಗಳೂರು: ನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಭವಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಪ್ರಕರಣದ ಹಿಂದಿನ ಅಸಲಿ ಸತ್ಯವನ್ನು ಬಯಲಿಗೆಳೆಯುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ವೈಯಕ್ತಿಕ ಹಗೆತನ ಹಾಗೂ ತಂಗಿಯ ಮದುವೆ ಮುರಿದುಬಿದ್ದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಐಇಡಿ ಬಾಂಬ್ ಸ್ಫೋಟಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಬುರ್ಹಾನ್ ಅಹಮದ್ ಬುರ್‌ದ್ವಯಾ (20), ಜಹಿದುಲ್ ಹುಸೇನ್ ಬುರ್‌ದ್ವಯಾ (27) ಮತ್ತು ಸಜಿದುಲ್ ಲಷ್ಕರ್ (22) ಬಂಧಿತ ಆರೋಪಿಗಳಾಗಿದ್ದಾರೆ.
ತನಿಖೆಯ ವೇಳೆ ಬಯಲಾದ ಮಾಹಿತಿಯಂತೆ, ಅಸ್ಸಾಂನ ಹೈಲ್‌ಕಂಡಿ ಜಿಲ್ಲೆಯ ದಿನನಾಥ್‌ಪುರದ ಜಹಿದುಲ್ ಹಾಗೂ ಅಲ್ಲಾವುದ್ದೀನ್ ಬಾಲ್ಯ ಸ್ನೇಹಿತರು ಮತ್ತು ಸಂಬಂಧಿಕರಾಗಿದ್ದರು.
ಊರಿನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಈ ಗಲಾಟೆಯ ಕಾರಣದಿಂದಾಗಿ ಜಹಿದುಲ್ ತಂಗಿಯ ಮದುವೆ ಕ್ಯಾನ್ಸಲ್ ಆಗಿತ್ತು.
ಇದಕ್ಕೆ ಅಲ್ಲಾವುದ್ದೀನ್‌ನೇ ನೇರ ಕಾರಣ ಎಂದು ಆಕ್ರೋಶಗೊಂಡಿದ್ದ ಜಹಿದುಲ್, ಅವನನ್ನು ಕೊಲೆ ಮಾಡಲು ನಿರ್ಧರಿಸಿ ತನ್ನ ಸ್ನೇಹಿತ ಬುರ್ಹಾನ್ ಜೊತೆ ಸೇರಿ ಬಾಂಬ್ ಇಟ್ಟು ಕೊಲ್ಲುವ ಭೀಕರ ಯೋಜನೆ ರೂಪಿಸಿದ್ದ. ಸಜಿದುಲ್ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದ.
ಎಂಟನೇ ತರಗತಿವರೆಗೆ ಓದಿರುವ ಬುರ್ಹಾನ್, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ತನಗಿದ್ದ ಎಲೆಕ್ಟ್ರಿಕಲ್ ಜ್ಞಾನದ ಜೊತೆಗೆ, ಕೆಲ ವೆಬ್‌ಸೈಟ್‌ಗಳು, ವಿಡಿಯೊಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬಾಟ್‌ನ ನೆರವು ಪಡೆದು ಐಇಡಿ ಬಾಂಬ್ ತಯಾರಿಸುವುದು ಹೇಗೆ ಎಂದು ಕಲಿತುಕೊಂಡಿದ್ದ. ಸ್ಥಳೀಯ ಅಂಗಡಿಗಳಲ್ಲಿ ಗನ್ ಪೌಡರ್, ಪಟಾಕಿ ಮದ್ದು, ಬಾಲ್ ಬೇರಿಂಗ್, ಬ್ಯಾಟರಿ ಸರ್ಕೀಟ್ ಹಾಗೂ ಬಟನ್‌ಗಳನ್ನು ಖರೀದಿಸಿ, ಮಸ್ಕಿಯ ತನ್ನ ಬಾಡಿಗೆ ಮನೆಯಲ್ಲಿ ಐಇಡಿ ತಯಾರಿಸಿದ್ದ. ಬಳಿಕ ಅದನ್ನು ಪಾರ್ಸೆಲ್ ಬಾಕ್ಸ್‌ನಲ್ಲಿಟ್ಟು ಬಸ್ ಮೂಲಕ ಬೆಂಗಳೂರಿಗೆ ತಂದಿದ್ದ. ಪುಲಕೇಶಿನಗರದ ಐದಂತಸ್ತಿನ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಲ್ಲಾವುದ್ದೀನ್‌ನನ್ನು ಗುರಿಯಾಗಿಸಿಕೊಂಡು ಅಕ್ಟೋಬರ್ 19ರಂದು ಕಟ್ಟಡದ ಸಮೀಪದ ಪೆಟ್ಟಿಗೆ ಅಂಗಡಿಯೊಂದರಲ್ಲಿ ಪಾರ್ಸೆಲ್ ಇಟ್ಟು ಹೋಗಿದ್ದರು.


